ಕರ್ನಾಟಕ

karnataka

ETV Bharat / international

ಚೀನಾ, ಸೌದಿ ಅರೇಬಿಯಾದಿಂದ 11 ಶತಕೋಟಿ ಡಾಲರ್​ ಸಹಾಯ ಬಯಸಿದ ಪಾಕಿಸ್ತಾನ - ಬಾಹ್ಯ ಹಣಕಾಸು ಅಗತ್ಯತೆ

ನಗದು ಕೊರತೆಯಲ್ಲಿರುವ ಪಾಕಿಸ್ತಾನವು ಚೀನಾ ಮತ್ತು ಸೌದಿ ಅರೇಬಿಯಾದಿಂದ ಸುಮಾರು USD 11 ಶತಕೋಟಿ ಡಾಲರ್‌ಗಳಷ್ಟು ನೆರವು ಬಯಸುತ್ತಿದೆ.

ಪಾಕಿಸ್ತಾನ
ಪಾಕಿಸ್ತಾನ

By ETV Bharat Karnataka Team

Published : Sep 29, 2023, 9:21 PM IST

ಇಸ್ಲಾಮಾಬಾದ್ (ಪಾಕಿಸ್ತಾನ) :ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನವು ಚೀನಾ ಮತ್ತು ಸೌದಿ ಅರೇಬಿಯಾದಿಂದ ಸುಮಾರು USD 11 ಶತಕೋಟಿ ಡಾಲರ್‌ ನೆರವನ್ನು ಬಯಸುತ್ತಿದೆ. ಇದರಿಂದ ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಂಗಾಮಿ ಸರ್ಕಾರ ಮುಂದಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಸೆನೆಟರ್ ಸಲೀಂ ಮಾಂಡ್ವಿವಾಲಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಹಣಕಾಸು ಮತ್ತು ಆದಾಯದ ಸೆನೆಟ್ ಸ್ಥಾಯಿ ಸಮಿತಿಯ ಮುಂದೆ ಉಸ್ತುವಾರಿ ಹಣಕಾಸು ಸಚಿವ ಶಂಶಾದ್ ಅಖ್ತರ್ ಅವರು ನೀಡಿದ ವಿವರವಾದ ಹೇಳಿಕೆ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಸರ್ಕಾರವು ಪ್ರಸ್ತುತ ಆರ್ಥಿಕ ಪುನರುಜ್ಜೀವನ ಯೋಜನೆ ಅನ್ವಯ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ, ಈ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಉಸ್ತುವಾರಿ ಪ್ರಧಾನ ಮಂತ್ರಿ ಅನ್ವರ್ ಉಲ್ ಹಕ್ ಕಾಕರ್ ಅವರ ಮುಂದೆ ಪ್ರಸ್ತುತಪಡಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ ಎಂದು ವರದಿಯಾಗಿದೆ.

ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲು ಉಸ್ತುವಾರಿ ಸರ್ಕಾರವು ಸೀಮಿತ ವ್ಯಾಪ್ತಿಯನ್ನು ಹೊಂದಿದೆ. 700 ಮಿಲಿಯನ್ ಅಮೆರಿಕನ್​​ ಡಾಲರ್​​ ಸಾಲದ ಕಂತುಗಳ ಬಗ್ಗೆ ಖಚಿತಪಡಿಸಿಕೊಳ್ಳಲು ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಕಾರ್ಯಕ್ರಮದ ಭಾಗವಾಗಿರುವ ಸುಧಾರಣೆಗಳನ್ನು ಜಾರಿಗೆ ತರುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲವು ತೀವ್ರವಾಗಿ ಏರಿಕೆ ಕಂಡಿದೆ. ಮುಖ್ಯವಾಗಿ ಪಾಕಿಸ್ತಾನಿ ರೂಪಾಯಿ ಅಪಮೌಲ್ಯೀಕರಣ ಮತ್ತು ಬಡ್ಡಿದರ ಹೆಚ್ಚಳದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.

ಚಿಲ್ಲರೆ ವ್ಯಾಪಾರ, ಕೃಷಿ ಮತ್ತು ರಿಯಲ್ ಎಸ್ಟೇಟ್​ ವ್ಯವಹಾರಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಪ್ರಯತ್ನ ಹಾಗೂ ಈ ಸಂಬಂಧ ಕಾನೂನು ತಿದ್ದುಪಡಿ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಏರುತ್ತಿರುವ ಹಣಕಾಸು ಕೊರತೆ ನೀಗಿಸಲು ಕಠಿಣ ಕ್ರಮ ಅನಿವಾರ್ಯ ಎಂದು ಪಾಕ್​ ಹಣಕಾಸು ಸಚಿವರು ಪ್ರತಿಪಾದಿಸಿದ್ದಾರೆ.

ಹೆಚ್ಚುವರಿ 3 ಟ್ರಿಲಿಯನ್ ರೂಪಾಯಿಗಳನ್ನು ಖಜಾನೆಗೆ ಸೇರ್ಪಡೆ ಮಾಡಿಕೊಳ್ಳಲು ಅಲ್ಲಿನ ಸರ್ಕಾರ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸಲು ಉಸ್ತುವಾರಿ ಸರ್ಕಾರವು ನ್ಯಾಯಾಲಯಗಳಿಂದ ಬೆಂಬಲವನ್ನು ಕೋರುತ್ತಿದೆ ಎಂದು ಹಣಕಾಸು ಸಚಿವ ಅಖ್ತರ್ ಹೇಳಿದರು.

ಇದನ್ನೂ ಓದಿ:ಭಾರತ-ಕೆನಡಾ ಬಿಕ್ಕಟ್ಟಿನ ನಡುವೆ ಜಾಗತಿಕ ಬೆಳವಣಿಗೆ ಬಗ್ಗೆ ಚರ್ಚಿಸಿದ ಜೈಶಂಕರ್, ಬ್ಲಿಂಕೆನ್

ABOUT THE AUTHOR

...view details