ಬೀಜಿಂಗ್: ಚೀನಾದಜಿಯಾಂಗ್‌ಕ್ಸಿ ಪ್ರಾಂತ್ಯದಲ್ಲಿ ಭಾರಿಯಿಂದ ಭಾರಿ ಮಳೆ ಆಗಿದೆ. ಈ ಮಹಾ ಮಳೆಯಿಂದಾಗಿ ಸುಮಾರು 8ಲಕ್ಷಕ್ಕೂ ಹೆಚ್ಚು ನಿವಾಸಿಗಳು ಸಂತ್ರಸ್ತರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೇ 28 ರಿಂದ ಇತ್ತೀಚಿನವರೆಗೂ ಮಳೆಯು ಜಿಯಾಂಗ್ ಕ್ಸಿ ಪ್ರಾಂತ್ಯದ ಸುಮಾರು 80 ಜಿಲ್ಲೆಗಳಲ್ಲಿ ವಿನಾಶವನ್ನುಂಟುಮಾಡಿದೆ.
ಭಾರಿ ಪ್ರವಾಹದಿಂದಾಗಿ ಸುಮಾರು 76,300 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಸುಮಾರು 1.16 ಶತಕೋಟಿ ಯುವಾನ್ ($174 ಮಿಲಿಯನ್) ನಷ್ಟು ನೇರ ಆರ್ಥಿಕ ನಷ್ಟವನ್ನುಂಟು ಮಾಡಿದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಅಲ್ಲಿನ ಅಧಿಕಾರಿಗಳು ನೀಡಿದ ಅಂಕಿ- ಅಂಶಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜಿಯಾಂಗ್‌ಕ್ಸಿ ಪ್ರಾಂತ್ಯದಲ್ಲಿ ಭಾರಿ ಪ್ರವಾಹದ ಅಬ್ಬರ ಈಗೀಗ ತಗ್ಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರೆದಿದೆ. ಮಳೆ ಕಡಿಮೆ ಆಗಿದ್ದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಈ ಮಧ್ಯೆ ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರವು, ದೇಶದ ವಿವಿಧ ಭಾಗಗಳಲ್ಲಿ ಮಳೆಯ ಬಿರುಗಾಳಿಯ ಎಚ್ಚರಿಕೆ ನೀಡಿದೆ.
ಜಿಯಾಂಗ್‌ಕ್ಸಿ, ಫುಜಿಯಾನ್, ಗುವಾಂಗ್‌ಡಾಂಗ್, ಗುವಾಂಗ್‌ಕ್ಸಿ, ಯುನ್ನಾನ್ ಮತ್ತು ಹೈನಾನ್‌ನ ಕೆಲವು ಭಾಗಗಳ ಇಂದು ಭಾರಿ ಮಳೆ ಬೀಳುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ 180 ಮಿಮೀ ವರೆಗೆ ಮಳೆ ಬೀಳಬಹುದು ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ಎಚ್ಚರಿಕೆ ರವಾನಿಸಿದೆ.
ಇದನ್ನು ಓದಿ:ಬ್ರಿಟನ್ ರಾಜಕುಮಾರ ಹ್ಯಾರಿ - ಮೇಘನ್ ಮಾರ್ಕಲ್ ದಂಪತಿಯ ಪುತ್ರಿ ಫೋಟೋ ರಿಲೀಸ್