ಗಾಜಾಪಟ್ಟಿ:ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದಲ್ಲಿ 20 ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುವುದು ದುಸ್ಥರವಾಗಿದೆ. ಈಗಾಗಲೇ ಕೊನೆಯ ಜನರೇಟರ್ನಲ್ಲಿನ ಇಂಧನ ಖಾಲಿಯಾಗಿ 1 ಮಗು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ಮಕ್ಕಳ ರಕ್ಷಣೆಗೆ ಬರುವುದಾಗಿ ಹೇಳಿದ್ದ ಇಸ್ರೇಲ್ ನೆರವು ನೀಡುತ್ತಿಲ್ಲ ಎಂದು ಅಲ್ಲಿನ ವೈದ್ಯರು ಆರೋಪಿಸಿದ್ದಾರೆ. ಇದನ್ನು ಇಸ್ರೇಲ್ ಪಡೆ ನಿರಾಕರಿಸಿದೆ.
ಶಿಫಾ ಆಸ್ಪತ್ರೆಯನ್ನು ಹಮಾಸ್ ಉಗ್ರರು ಬಂಕರ್ ಆಗಿ ಬಳಸುತ್ತಿದ್ದಾರೆ. ನೆಲಮಾಳಿಗೆಯಲ್ಲಿ ಪೋಸ್ಟ್ಗಳನ್ನು ಸ್ಥಾಪಿಸಿಕೊಂಡಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ಸೇನೆ ಆಸ್ಪತ್ರೆಯ ಸುತ್ತ ಬಾಂಬ್ ದಾಳಿ ನಡೆಸುತ್ತಿದೆ. ಇದರಿಂದ ಅಲ್ಲಿಗೆ ತೆರಳಬೇಕಿದ್ದ ವಿದ್ಯುತ್, ವೈದ್ಯಕೀಯ ಸಲಕರಣೆಗಳು ಸ್ಥಗಿತವಾಗಿವೆ. ಇದರಿಂದ ಆಸ್ಪತ್ರೆ ಅಂಧಕಾರದಲ್ಲಿ ಮುಳುಗಿದೆ.
ಒತ್ತೆಯಾಳಾಗಿರುವ 240 ಇಸ್ರೇಲಿಗರನ್ನು ಬಿಡುಗಡೆ ಮಾಡುವವರೆಗೆ ಕದನ ವಿರಾಮವನ್ನು ನೀಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಎಚ್ಚರಿಕೆ ನೀಡಿದ್ದು, ಗಾಜಾದಲ್ಲಿ ಹಮಾಸ್‌ನ 16 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಗುರಿಯೊಂದಿಗೆ ಯುದ್ಧವನ್ನು ಮುಂದುವರಿಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಶಿಫಾ ಆಸ್ಪತ್ರೆಯ ಸುತ್ತಲೂ ಭಾರೀ ವೈಮಾನಿಕ ಮತ್ತು ಶೆಲ್ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಸಾವಿನ ದವಡೆಯಲ್ಲಿ ಶಿಶುಗಳು:ಗಾಜಾದ ಅತಿದೊಡ್ಡ ಆಸ್ಪತ್ರೆಯೊಳಗೆ ಸಿಲುಕಿರುವ ಆರೋಗ್ಯ ಅಧಿಕಾರಿಗಳು, ಜನರು ಮತ್ತು ಶಿಶುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ಹೇಳಿದ್ದ ಇಸ್ರೇಲ್ ಮಾತು ತಪ್ಪಿದೆ. ಇನ್‌ಕ್ಯುಬೇಟರ್‌ಗಳು ವಿದ್ಯುತ್ ಇಲ್ಲದೇ ನಿಷ್ಕ್ರಿಯವಾಗಿವೆ. ಅಗತ್ಯ ವಸ್ತುಗಳು ಖಾಲಿಯಾಗಿವೆ. ರೋಗಿಗಳು, ಶಿಶುಗಳು ಸಾವಿನ ದವಡೆಯಲ್ಲಿದ್ದಾರೆ ಎಂದು ಅಲ್ಲಿನ ವೈದ್ಯರು ಅಳಲು ತೋಡಿಕೊಂಡಿದ್ದಾರೆ.