ಟೆಲ್ ಅವೀವ್ (ಇಸ್ರೇಲ್):ಅಧಿಕ ಭದ್ರತೆ ಮತ್ತು ಶಾಂತಿ ಕಾಪಾಡಿಕೊಂಡಿದ್ದ ಈಜಿಪ್ಟ್- ಇಸ್ರೇಲ್ ಗಡಿಯಲ್ಲಿ 10 ವರ್ಷಗಳ ಬಳಿಕ ಮೊದಲ ಬಾರಿಗೆ ಗುಂಡಿನ ಮೊರೆತ ಕೇಳಿಬಂದಿದೆ. ಈಜಿಪ್ಟ್ ಪೊಲೀಸ್ ಅಧಿಕಾರಿಯ ವೇಷದಲ್ಲಿದ್ದ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿ ಮೂವರು ಇಸ್ರೇಲ್ ಯೋಧರು ಹತ್ಯೆಯಾಗಿದ್ದಾರೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಶಂಕಿತ ವ್ಯಕ್ತಿಯನ್ನೂ ಹತ್ಯೆ ಮಾಡಲಾಗಿದೆ.
ಶನಿವಾರ ಮುಂಜಾನೆ ಭದ್ರತಾ ಬೇಲಿ ದಾಟಿಕೊಂಡು ಬಂದ ಬಂದೂಕುಧಾರಿ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗುಂಡಿನ ಮಳೆ ಸುರಿಸಿದ್ದಾನೆ. ಇದರಿಂದ ಸ್ಥಳದಲ್ಲೇ ಇಬ್ಬರು ಇಸ್ರೇಲ್ ಯೋಧರು ಸಾವಿಗೀಡಾದರು. ತಕ್ಷಣವೇ ಎಚ್ಚೆತ್ತ ಇಸ್ರೇಲ್ ಪಡೆ ಕಾರ್ಯಾಚರಣೆಗೆ ಇಳಿಯಿತು. ಮತ್ತೊಂದು ಸುತ್ತಿನ ದಾಳಿಯಲ್ಲಿ ಇನ್ನೊಬ್ಬ ಯೋಧ ಪ್ರಾಣ ಕಳೆದುಕೊಂಡರೆ, ಪೊಲೀಸ್ ಅಧಿಕಾರಿ ವೇಷದಲ್ಲಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಈ ದಾಳಿ ಇಸ್ರೇಲ್, ಈಜಿಪ್ಟ್ ಮತ್ತು ಗಾಜಾ ಪಟ್ಟಿ ಸಂಧಿಸುವ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶವನ್ನು ಇಸ್ರೇಲ್ ಅಥವಾ ಗಾಜಾ ಪಟ್ಟಿಗೆ ಈಜಿಪ್ಟ್‌ನಿಂದ ಸರಕುಗಳನ್ನು ತರಲು ಮಾತ್ರ ಬಳಕೆ ಮಾಡಲಾಗುತ್ತದೆ. ಈಜಿಪ್ಟ್‌ನ ರಕ್ಷಣಾ ಸಚಿವ ಮೊಹಮದ್ ಝಾಕಿ ಅವರು ತಮ್ಮ ಇಸ್ರೇಲ್ ರಕ್ಷಣಾ ಸಚಿವರೊಂದಿಗೆ ಗಡಿಯಲ್ಲಿ ಗುಂಡಿನ ದಾಳಿಯ ಕುರಿತು ಮಾತುಕತೆ ನಡೆಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪರಸ್ಪರ ಸಮನ್ವಯತೆ ಸಾಧಿಸಲಾಗುವುದು ಎಂದು ಈಜಿಪ್ಟ್ ಮಿಲಿಟರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಾಳಿ ಬಗ್ಗೆ ತನಿಖೆ:ಈಜಿಪ್ಟ್ ಸೇನೆಯ ಪ್ರಕಾರ, ಈಜಿಪ್ಟ್ ಗಡಿ ಯೋಧರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬೆನ್ನಟ್ಟುತ್ತಿದ್ದ ವೇಳೆ ಶಂಕಿತ ವ್ಯಕ್ತಿ, ಗಡಿ ಭದ್ರತಾ ಬೇಲಿಯನ್ನು ಭೇದಿಸಿ ಇಸ್ರೇಲಿ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬೇಲಿ ದಾಟಿದ ಬಗ್ಗೆ ಮಾಹಿತಿ ನೀಡಲು ಕರೆ ಮಾಡಲಾಯಿತಾದರೂ ಇಸ್ರೇಲ್ ಯೋಧರು, ತಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ದಾಳಿಕೋರ ಈಜಿಪ್ಟ್ ಪೊಲೀಸ್ ಅಧಿಕಾರಿಯ ವೇಷದಲ್ಲಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.