ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಪದಚ್ಯುತ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ರಾಜಕೀಯವಾಗಿ ಏಕಾಂಗಿಯಾಗುತ್ತಿದ್ದು, ತಮ್ಮ ರಾಜಕೀಯ ಜೀವನದ ಅತಿ ಕ್ಲಿಷ್ಟಕರ ಹಂತದಲ್ಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಇಮ್ರಾನ್ ಅವರನ್ನು ಇಸ್ಲಾಮಾಬಾದ್ನಲ್ಲಿ ಬಂಧಿಸಿದ ನಂತರ ಪಾಕಿಸ್ತಾನದ ವಿವಿಧ ನಗರಗಳಲ್ಲಿ ಸಂಭವಿಸಿದ ಭಾರಿ ಹಿಂಸಾಚಾರದ ಕಾರಣ ನೀಡಿ ಇಮ್ರಾನ್ಗೆ ಅತ್ಯಾಪ್ತರಾಗಿದ್ದ ಪಿಟಿಐನ ನೂರಾರು ನಾಯಕರು ಪಕ್ಷ ತೊರೆಯುತ್ತಿರುವುದು ಇಮ್ರಾನ್ ಏಕಾಂಗಿಯಾಗಲು ಪ್ರಮುಖ ಕಾರಣವಾಗಿದೆ. ಪಿಟಿಐನ ಪ್ರಮುಖ ನಾಯಕರಾದ ಮಾಜಿ ರಕ್ಷಣಾ ಮಂತ್ರಿ ಪರ್ವೇಜ್ ಖಟಕ್ ಮತ್ತು ನ್ಯಾಷನಲ್ ಅಸೆಂಬ್ಲಿಯ ಮಾಜಿ ಸ್ಪೀಕರ್ ಅಸಾದ್ ಕೈಸರ್ ಕೂಡ ಇತ್ತೀಚೆಗೆ ಪಕ್ಷ ತೊರೆದಿದ್ದಾರೆ.
"ಮೇ 9 ರಂದು ನಡೆದ ಯಾವ ಘಟನೆಗಳೂ ಸಮರ್ಥನೀಯವಲ್ಲ. ಘಟನೆಗಳನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ಮತ್ತೊಮ್ಮೆ ಅಂಥ ಘಟನೆಗಳು ನಡೆಯದಂತೆ ದೇಚರು ಕಾಪಾಡಲಿ. ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಹಾಳಾಗಿದೆ. ನಾನು ಪಕ್ಷದಲ್ಲಿನ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದೇನೆ. ಆಪ್ತರೊಂದಿಗೆ ಚರ್ಚಿಸಿದ ನಂತರ ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ" ಖಟಕ್ ಹೇಳಿದ್ದಾರೆ. ಪರ್ವೇಜ್ ಈ ಮುನ್ನ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದರು ಹಾಗೂ ಪಕ್ಷದ ಪ್ರಾಂತ್ಯ ಘಟಕದ ಅಧ್ಯಕ್ಷರೂ ಆಗಿದ್ದರು.
ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಕೊನೆಗಾಣಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಮ್ಮ ಪಕ್ಷದ ಪರವಾಗಿ ಇಮ್ರಾನ್ ಇದೇ ಖಟಕ್ ಹಾಗೂ ಕೈಸರ್ ಅವರನ್ನು ನಾಮನಿರ್ದೇಶನ ಮಾಡಿದ್ದರು. ಆದರೆ ಮಾತುಕತೆಗೆ ಮುನ್ನವೇ ಇಬ್ಬರೂ ಉನ್ನತ ನಾಯಕರು ಪಕ್ಷದಿಂದಲೇ ಹೊರನಡೆದಿದ್ದಾರೆ. ಮೇ 9ರ ಹಿಂಸಾಚಾರದ ನಂತರ ಸುಮಾರು 100 ಜನ ಪಕ್ಷದ ಉನ್ನತ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಆದರೆ ಈ ನಾಯಕರು ಪಕ್ಷ ಬಿಡಲು ನೀಡಿರುವ ದ್ವಂದ್ವದ ಹೇಳಿಕೆಗಳು ಮತ್ತು ಕಾರಣಗಳು ಹಲವಾರು ಸಂಶಯಗಳನ್ನು ಮೂಡಿಸಿವೆ.
ಪಿಟಿಐ ಪಕ್ಷದ ಮೊದಲ ವ್ಯಕ್ತಿಯು ಪಕ್ಷ ಬಿಟ್ಟಾಗಿನಿಂದ 102ನೇ ವ್ಯಕ್ತಿಯು ಪಕ್ಷ ಬಿಡುವಾಗ ಅವರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ- ಎಲ್ಲರೂ ಒಂದೇ ಪಾಠವನ್ನು ಓದುತ್ತಿರುವಂತೆ ಕಾಣಿಸುತ್ತಿದೆ. ಅವರೆಲ್ಲರೂ ಎಷ್ಟು ದೊಡ್ಡ ಮಟ್ಟದ ಒತ್ತಡ, ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳಕ್ಕೆ ಈಡಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪಿಟಿಐ ಪಕ್ಷದ ಸಂಪರ್ಕ ಕಾರ್ಯದರ್ಶಿ ರವೂಫ್ ಹಸನ್ ಹೇಳಿದ್ದಾರೆ.