ಬ್ಯಾಂಕಾಕ್: ದೇಶ ಆರ್ಥಿಕ ದಿವಾಳಿಗೆ ಒಳಗಾಗಿದ್ದರಿಂದ ಲಂಕಾದಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗಿತ್ತು. ಜನರ ಪ್ರತಿಭಟನೆಯ ನಂತರ ಶ್ರೀಲಂಕಾದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಈಗ ಸಿಂಗಾಪುರ ತೊರೆದಿದ್ದಾರೆ.
ಸಿಂಗಾಪುರದಲ್ಲಿ ಒಂದು ತಿಂಗಳ ಅವಧಿಯ ವೀಸಾ ಮುಗಿದಿದ್ದರಿಂದ ಅವರೀಗ ಬ್ಯಾಂಕಾಕ್‌ಗೆ ಆಗಮಿಸಿದ್ದಾರೆ. ಸಿಂಗಾಪುರ ಸರ್ಕಾರವು ಅವರ ವೀಸಾವನ್ನು ಆಗಸ್ಟ್ 11 ರವರೆಗೆ ವಿಸ್ತರಿಸಿದೆ. ರಾಜಪಕ್ಸೆ ಅವರು ಶ್ರೀಲಂಕಾದಲ್ಲಿ ಭುಗಿಲೆದ್ದ ದಂಗೆ ಹಿನ್ನೆಲೆಯಲ್ಲಿ ಅಲ್ಲಿಂದ ಪಲಾಯನ ಮಾಡಿದ್ದರು. ಮಾಲ್ಡೀವ್ಸ್‌ನಿಂದ ಖಾಸಗಿ ಭೇಟಿಗಾಗಿ ಜುಲೈ 14 ರಂದು ಸಿಂಗಾಪುರಕ್ಕೆ ಆಗಮಿಸಿದ್ದರು. ಜುಲೈ 13 ರಂದು ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದ ಅವರು, ಅಲ್ಲಿಂದ ಅವರು ಸಿಂಗಾಪುರಕ್ಕೆ ತೆರಳಿದ್ದರು.
ಜುಲೈ 14 ರಂದು ಮಾಲ್ಡೀವ್ಸ್‌ನಿಂದ ಚಾಂಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಶ್ರೀಲಂಕಾದ ಮಾಜಿ ಅಧ್ಯಕ್ಷರಿಗೆ 14 ದಿನಗಳ ಪಾಸ್ ನೀಡಲಾಗಿತ್ತು. ಆರಂಭದಲ್ಲಿ ನಗರದ ಮಧ್ಯಭಾಗದಲ್ಲಿರುವ ಹೋಟೆಲ್ವೊಂದರಲ್ಲಿ ತಂಗಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ, ಅವರು ಖಾಸಗಿ ನಿವಾಸಕ್ಕೆ ತೆರಳಿದ್ದಾರೆ ಎಂದೂ ಹೇಳಲಾಗುತ್ತಿದೆ. ವರದಿಯ ಪ್ರಕಾರ, ಗೋತಬಯ ಅವರು ಸಿಂಗಾಪುರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಶ್ರೀಲಂಕಾ ಸಂಸತ್ತು ಬುಧವಾರ ರಾಜಪಕ್ಸೆ ಅವರ ಮಿತ್ರ ರನಿಲ್ ವಿಕ್ರಮಸಿಂಘೆ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ. 44 ವರ್ಷಗಳಲ್ಲಿ ಶ್ರೀಲಂಕಾದ ಸಂಸತ್ತು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ಇದೇ ಮೊದಲು.
ಇದನ್ನು ಓದಿ:ಪಾಕ್ ಉಗ್ರರಿಗೆ ಚೀನಾ ಬೆಂಬಲ: ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ತಡೆ