ಮಾಲೆ (ಮಾಲ್ಡೀವ್ಸ್) :ಪ್ರಧಾನಿ ಮೋದಿ ಮತ್ತು ಭಾರತವನ್ನು ಟೀಕಿಸಿದ ಮಾಲ್ಡೀವ್ಸ್ ಸಚಿವರ ವಿರುದ್ಧ ಕ್ರಮಕ್ಕೆ ಅಲ್ಲಿನ ಸಂಸದರೇ ಆಗ್ರಹಿಸಿದ್ದಾರೆ. ಭಾರತ ಯಾವಾಗಲೂ ನಮಗೆ 911 ಕಾಲ್ (ತುರ್ತು ಪರಿಸ್ಥಿತಿ) ಇದ್ದ ಹಾಗೆ. ದೀರ್ಘಕಾಲದ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ ಎಂದು ರಕ್ಷಣಾ ಇಲಾಖೆ ಮಾಜಿ ಸಚಿವೆ ಮರಿಯಾ ಅಹ್ಮದ್ ದೀದಿ ಸಲಹೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರ ವಿರುದ್ಧದ ಸಚಿವರ ಹೇಳಿಕೆಗಳು ಮಾಲ್ಡೀವ್ಸ್ ಸರ್ಕಾರದ ದೂರದೃಷ್ಟಿಯನ್ನು ಪ್ರದರ್ಶಿಸುತ್ತವೆ. ಭಾರತ ಎಂದಿಗೂ ವಿಶ್ವಾಸಾರ್ಹ ಮಿತ್ರರಾಷ್ಟ್ರ. ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಾಯ ಒದಗಿಸಿದೆ. ಇಂತಹ ದೀರ್ಘಕಾಲದ ಸಂಬಂಧವನ್ನು ಹಾಳುಮಾಡುವ ಯಾವುದೇ ಪ್ರಯತ್ನ ಒಳಿತಲ್ಲ. ಮಾಲ್ಡೀವ್ಸ್ಗೆ, ಭಾರತ 911 ಕರೆ ಇದ್ದ ಹಾಗೆ. ತುರ್ತು ಪರಿಸ್ಥಿತಿಯಲ್ಲಿ ನೆರವು ನೀಡುವ ಮಿತ್ರದೇಶ ಎಂದು ಬಣ್ಣಿಸಿದ್ದಾರೆ.
ದೇಶಕ್ಕೆ ಅಗತ್ಯವಿರುವ ವೇಳೆ ಭಾರತ ರಕ್ಷಣೆಗೆ ಬಂದಿದೆ. ಮೇಲಾಗಿ ನಾವು ಗಡಿಯನ್ನು ಹಂಚಿಕೊಂಡಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಮಾಲ್ಡೀವ್ಸ್ ಸ್ವಾವಲಂಬಿಯನ್ನಾಗಿ ಮಾಡಲು ಭಾರತ ಉಪಕರಣಗಳನ್ನು ಒದಗಿಸಿದೆ. ಪ್ರಜಾಪ್ರಭುತ್ವದ ವಿಚಾರದಲ್ಲಿ ಮಾಲ್ಡೀವ್ಸ್ ಮತ್ತು ಭಾರತ ಸಮಾನ ಮನಸ್ಕ ರಾಷ್ಟ್ರಗಳಾಗಿವೆ. ಕೋವಿಡ್ ಸಾಂಕ್ರಾಮಿಕದ ವೇಳೆ ಲಸಿಕೆಗಳನ್ನು ನೀಡಿ ಇಲ್ಲಿನ ಜನರನ್ನು ಕಾಪಾಡಿದೆ ಎಂದು ಮರಿಯಾ ಅಹ್ಮದ್ ದೀದಿ ನೆನಪಿಸಿದ್ದಾರೆ.