ಫ್ಲೋರಿಡಾ (ಅಮೆರಿಕ): ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಲ್ಲಿರುವ ಡಾಲರ್ ಜನರಲ್ ಸ್ಟೋರ್‌ನಲ್ಲಿ ಶನಿವಾರ ಮಧ್ಯಾಹ್ನ 'ಜನಾಂಗೀಯ ಪ್ರೇರಿತ' ಗುಂಡಿನ ದಾಳಿ ನಡೆದಿದೆ. ಮೂರು ಜನರು ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ್ದ ಆರೋಪಿಯೂ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಕ್ಸನ್‌ವಿಲ್ಲೆಯ ಶೆರಿಫ್ ಟಿ.ಕೆ. ವಾಟರ್ಸ್ ಪ್ರತಿಕ್ರಿಯಿಸಿ, "ಶಂಕಿತ ಆರೋಪಿ ಕಪ್ಪು ಜನಾಂಗದ ಜನರನ್ನು ತೀವ್ರವಾಗಿ ದ್ವೇಷಿಸುತ್ತಿದ್ದ. ಹಾಗಾಗಿ, ಇದೊಂದು ಜನಾಂಗೀಯ ಪ್ರೇರಿತ ಗುಂಡಿನ ದಾಳಿಯಾಗಿದೆ. ಆರೋಪಿ ಬಿಳಿ ಜನಾಂಗೀಯನಾಗಿದ್ದು ದಾಳಿಯ ನಂತರ ತನಗೂ ಗುಂಡು ಹಾರಿಸಿಕೊಂಡಿದ್ದಾನೆ. ಆರೋಪಿಯು ತನಗಿದ್ದ ದ್ವೇಷ ಮನಸ್ಥಿತಿ ಮತ್ತು ದಾಳಿಯ ಹಿಂದಿನ ಉದ್ದೇಶವನ್ನು ತಿಳಿಸುವ ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾನೆ" ಎಂದು ಮಾಹಿತಿ ನೀಡಿದರು.
ಜಾಕ್ಸನ್‌ವಿಲ್ಲೆ ಮೇಯರ್ ಡೊನ್ನಾ ಡೀಗನ್ ಮಾತನಾಡಿ, "ದಾಳಿಯ ಬಳಿಕ ಶಂಕಿತ ಆರೋಪಿಯು ಅಂಗಡಿಯೊಳಗೆ ಹೋಗಿ ತನಗೆ ತಾನೇ ಶೂಟ್ ಮಾಡಿಕೊಂಡ" ಎಂದಿದ್ದಾರೆ. ಜ್ಯಾಕ್ಸನ್‌ವಿಲ್ಲೆಯ ಅಗ್ನಿಶಾಮಕ ಮತ್ತು ಭದ್ರತಾ ಇಲಾಖೆಯ ವಕ್ತಾರ ಎರಿಕ್ ಪ್ರಾಸ್ವಿಮ್ಮರ್, "ದಾಳಿಯಿಂದ ಗಾಯಗೊಂಡಿರುವ ಜನರಿಗೆ ಚಿಕಿತ್ಸೆ ನೀಡಲು ಇಲಾಖೆ ಸಿದ್ಧವಾಗಿದೆ. ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದರ ಕುರಿತು ಸದ್ಯಕ್ಕೆ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ" ಎಂದರು.
ಜಾಕ್ಸನ್ವಿಲ್ಲೆ ಎಂಬ ಪ್ರದೇಶ ಈಶಾನ್ಯ ಫ್ಲೋರಿಡಾದಲ್ಲಿದೆ. ಜಾರ್ಜಿಯಾ ಗಡಿಯಿಂದ ದಕ್ಷಿಣಕ್ಕೆ 35 ಮೈಲುಗಳಷ್ಟು ದೂರದಲ್ಲಿದೆ. ಘಟನೆ ನಡೆದ ಡಾಲರ್ ಜನರಲ್ ಅಂಗಡಿಯ ಸಮೀಪವಿರುವ ಪ್ರದೇಶ ಹಲವಾರು ಚರ್ಚ್‌ಗಳನ್ನು ಹೊಂದಿದೆ. ಇಲ್ಲಿಂದ ಒಂದು ಮೈಲಿಗಿಂತಲೂ ಕಡಿಮೆ ದೂರದಲ್ಲಿ ಕಪ್ಪುವರ್ಣೀಯರ ಖಾಸಗಿ ಕ್ರಿಶ್ಚಿಯನ್ ಕಾಲೇಜು ಎಡ್ವರ್ಡ್ ವಾಟರ್ಸ್ ವಿಶ್ವವಿದ್ಯಾನಿಲಯ ಇದೆ. ಪ್ರಾಥಮಿಕ ವರದಿಗಳ ಪ್ರಕಾರ, ಘಟನೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಪರಿಸ್ಥಿತಿ ಶಾಂತವಾಗುವರೆಗೆ ವಿದ್ಯಾರ್ಥಿಗಳನ್ನು ಅವರ ನಿವಾಸದಲ್ಲಿರಲು ಸೂಚಿಸಲಾಗಿದೆ.