ವಾಷಿಂಗ್ಟನ್ (ಅಮೆರಿಕ): ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಅನೇಕ ಕಂಪನಿಗಳು ಕೆಲಸಗಾರರನ್ನು ವಜಾಗೊಳಿಸುತ್ತಿವೆ. ಆ ಸಾಲಿಗೆ ಇದೀಗ ಫೇಸ್‌ಬುಕ್ ಕೂಡ ಸೇರಲಿದೆ. ಫೇಸ್‌ಬುಕ್ ಮಾತೃ ಸಂಸ್ಥೆಯಾದ ಮೆಟಾ ಪ್ಲಾಟ್‌ಫಾರ್ಮ್ ಮುಂದಿನ ಕೆಲವು ತಿಂಗಳುಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ 13 % ರಷ್ಟು ಕೆಲಸಗಾರರನ್ನು ಕಡಿತಗೊಳಿಸಲಾಗಿತ್ತು. ಸರಿಸುಮಾರು 11,000 ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಈ ಬಾರಿ ಸಹ ಅದೇ ಪ್ರಮಾಣದಲ್ಲಿ ಮುಂಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಕ್ರಮ ಕೈಗೊಂಡಿದೆ ಎಂದು ಅಲ್ಲಿನ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಸುತ್ತಿನ ಉದ್ಯೋಗ ಕಡಿತವನ್ನು ಮುಂದಿನ ವಾರ ಘೋಷಿಸಲಾಗುವುದು. ಅದರಲ್ಲೂ ಇಂಜಿನಿಯರಿಂಗ್ ಹೊರತುಪಡಿಸಿ ಉಳಿದೆಲ್ಲಾ ಕೆಲಸಗಾರರಿಗೆ ತೀವ್ರ ಹೊಡೆತ ಬೀಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಟ್ವಿಟರ್ನಲ್ಲಿ ಉದ್ಯೋಗಿಗಳ ಕೊರತೆ: ಸುಳ್ಳು ಸುದ್ದಿ, ಟ್ರೋಲಿಂಗ್ ತಡೆಯುವುದು ಕಷ್ಟಕರ
ರಿಯಾಲಿಟಿ ಲ್ಯಾಬ್ಸ್, ಮೆಟಾದ ಹಾರ್ಡ್‌ವೇರ್ ಮತ್ತು ಮೆಟಾವರ್ಸ್ ವಿಭಾಗದಲ್ಲಿ ಕೆಲಸ ಮಾಡಲು ಬಳಸುತ್ತಿರುವ ಕೆಲವು ಸಾಧನಗಳನ್ನು ಸಹ ಕಡಿತಗೊಳಿಸುವ ಸಾಧ್ಯತೆ ಇದೆ. ಜಾಹೀರಾತು ಆದಾಯದಲ್ಲಿ ಮಂದಗತಿ ಕಂಡಿರುವ ಮೆಟಾ ಸಂಸ್ಥೆಯು, ಮೆಟಾವರ್ಸ್ ಎಂಬ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ನತ್ತ ಗಮನ ಹರಿಸುತ್ತಿದೆ. ಹಾಗಾಗಿ, ಕೈ ಬಿಡಬಹುದಾದ ಉದ್ಯೋಗಿಗಳನ್ನು ಪಟ್ಟಿ ಮಾಡುವಂತೆ ನಿರ್ದೇಶಕರು ಹಾಗೂ ಉಪಾಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.