ಮಾಸ್ಕೋ (ರಷ್ಯಾ):ವಿದೇಶಾಂಗ ಸಚಿವ ಎಸ್ ಜೈಶಂಕರ್ ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದು ಮಾಸ್ಕೋ ತಲುಪಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ನಡುವೆ ಈ ಭೇಟಿ ಕುತೂಹಲ ಮೂಡಿಸಿದೆ. ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಉಭಯ ದೇಶಗಳ ನಡುವಿನ ಸಂಬಂಧದ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವಾಲಯದ ಪ್ರಕಾರ, ಲಾವ್ರೊವ್ ಮತ್ತು ಜೈಶಂಕರ್ ಭೇಟಿಯ ವೇಳೆ ಎರಡೂ ದೇಶಗಳ ನಡುವಿನ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಪರಸ್ಪರ ಅಭಿಪ್ರಾಯಗಳ ವಿನಿಮಯವಾಗಲಿದೆ.
ಜೈಶಂಕರ್ ರಷ್ಯಾ ಭೇಟಿಗೂ ಮುನ್ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರಷ್ಯಾ, ಜಾಗತಿಕ ಮಟ್ಟದಲ್ಲಿ ನ್ಯಾಯಯುತ ಮತ್ತು ಸಮಾನತೆಯನ್ನು ಸ್ಥಾಪಿಸಲು ಎರಡೂ ದೇಶಗಳು ಬದ್ಧವಾಗಿವೆ. ಇತರ ದೇಶಗಳು ಪಾಲಿಸುವ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ರಷ್ಯಾ ಹಾಗೂ ಭಾರತ ವಿರೋಧಿ ಎಂದು ಹೇಳಿದೆ.
ವ್ಯಾಪಾರ ಮತ್ತು ಹೂಡಿಕೆ, ಸಾರಿಗೆ ಮತ್ತು ಸರಕು ಸಾಗಾಟ ಕ್ಷೇತ್ರಗಳ ಪರಸ್ಪರ ವಹಿವಾಟುಗಳಲ್ಲಿ ರಾಷ್ಟ್ರೀಯ ಕರೆನ್ಸಿಗಳನ್ನು ಬಳಸುವ ಕುರಿತು, ಮುಖ್ಯವಾಗಿ ಆರ್ಕ್ಟಿಕ್ ಶೆಲ್ಫ್ ಮತ್ತು ರಷ್ಯಾದ ದೂರದ ಪೂರ್ವ ಪ್ರದೇಶದಲ್ಲಿ ಇಂಧನ ಕ್ಷೇತ್ರದಲ್ಲಿ ಭರವಸೆಯ ಯೋಜನೆಗಳನ್ನು ರೂಪಿಸುವ ಕುರಿತು ಮಹತ್ವದ ಮಾತುಕತೆ ನಡೆಯಲಿದೆ.
ಇನ್ನು ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತಂತೆ ವಿಶ್ವಸಂಸ್ಥೆ, ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ), 20 ದೇಶಗಳ ಒಕ್ಕೂಟ (ಜಿ 20) ಮತ್ತು ಆರ್‌ಐಸಿ (ರಷ್ಯಾ, ಭಾರತ, ಚೀನಾ) ಒಕ್ಕೂಟಗಳ ನಡುವೆ ಚರ್ಚಿಸಲಾಗುವುದು. ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತದ ಅಧ್ಯಕ್ಷತೆ, ಭಯೋತ್ಪಾದನೆ ವಿರುದ್ಧ ಹೋರಾಡುವ ಪ್ರಯತ್ನಗಳು, ಹಾಗೆಯೇ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ರಚನೆ, ಇರಾನ್ ಪರಮಾಣು ಸಮಸ್ಯೆಯ ಸುತ್ತಲಿನ ಪರಿಸ್ಥಿತಿ, ರಾಜ್ಯ ಸೇರಿದಂತೆ ಹಲವಾರು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಅದರಲ್ಲೂ ಅಫ್ಘಾನಿಸ್ತಾನ, ಸಿರಿಯಾ ಮತ್ತು ಉಕ್ರೇನ್ ಜೊತೆಗಿನ ವ್ಯವಹಾರಗಳ ಕುರಿತು ಸಚಿವರು ಚರ್ಚಿಸಲಿದ್ದಾರೆ ಎಂದು ರಷ್ಯಾ ತಿಳಿಸಿದೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಮಧ್ಯೆ ಶಾಂತಿ ಸಂಧಾನ: ಭಾರತದತ್ತ ಜಗತ್ತಿನ ಚಿತ್ತ!