ಕ್ವೆಟ್ಟಾ (ಪಾಕಿಸ್ತಾನ):ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲಾಗಿದೆ. ನಾಲ್ವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.
"ಮೃತ ದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತರಲ್ಲಿ ಬಾಲಕಿಯೂ ಸೇರಿದ್ದಾಳೆ" ಎಂದು ಸ್ಥಳೀಯ ಆಸ್ಪತ್ರೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಕ್ವೆಟ್ಟಾ ಪೊಲೀಸರ ಮೇಲೆ ಎರಡನೇ ಬಾರಿ ದಾಳಿ ನಡೆಸಿದೆ. ಸ್ಫೋಟದಲ್ಲಿ ಓರ್ವ ಅಪ್ರಾಪ್ತೆಯೂ ಸೇರಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.
ಸ್ಫೋಟದ ಹೊಣೆ ಹೊತ್ತುಕೊಂಡಿರುವ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ, "ಬಲೂಚ್ ಲಿಬರೇಶನ್ ಆರ್ಮಿ ಈ ದಾಳಿಯ ಜವಬ್ದಾರಿ ವಹಿಸುತ್ತದೆ. ಬಲೂಚ್ ಜನರ ಮೇಲಿನ ದೌರ್ಜನ್ಯಕ್ಕಿದು ಪ್ರತೀಕಾರ. ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ" ಎಂದು ಬಿಎಲ್ಎ ವಕ್ತಾರ ಜುನೈದ್ ಬಲೂಚ್ ಹೇಳಿದ್ದಾರೆ.
"ಕಂದಹಾರಿ ಬಜಾರ್ನಲ್ಲಿ ನಿಲ್ಲಿಸಿದ್ದ ಪೊಲೀಸ್ ಅಧೀಕ್ಷಕರ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ನಾಲ್ಕರಿಂದ ಐದು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ. ಪೊಲೀಸ್ ವಾಹನದ ಹಿಂದೆ ನಿಲ್ಲಿಸಿದ ಮೋಟರ್ಸೈಕಲ್ನಲ್ಲಿ ಬಾಂಬ್ ಅಳವಡಿಸಿ ರಿಮೋಟ್ನಿಂದ ಸ್ಫೋಟಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ಶಫ್ಕತ್ ಚೀಮಾ ತಿಳಿಸಿದರು.