ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) :ಅಮೆರಿಕದ ಲೇಖಕ ಮತ್ತು ಪತ್ರಕರ್ತ ವಾಲ್ಟರ್ ಐಸಾಕ್ಸನ್ ಅವರು ಬರೆದ ಮಸ್ಕ್ ಅವರ ಜೀವನಾಧಾರಿತವಾದ 'ಎಲೋನ್ ಮಸ್ಕ್' ಶೀರ್ಷಿಕೆಯ ಜೀವನಚರಿತ್ರೆ ಗ್ರಂಥವು ಬಿಡುಗಡೆಯಾದ ಮೊದಲ ವಾರದಲ್ಲಿಯೇ ಅತ್ಯಧಿಕ ಮಾರಾಟ ಕಂಡಿದೆ. ಮೊದಲ ವಾರದಲ್ಲಿಯೇ ಇದರ 92,560 ಪ್ರತಿಗಳು ಮಾರಾಟವಾಗಿವೆ. ಪುಸ್ತಕ ಟ್ರ್ಯಾಕರ್ ಸಿರ್ಕಾನಾ ಬುಕ್ ಸ್ಕ್ಯಾನ್ ಸಂಸ್ಥೆಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಟೆಸ್ಲಾ ಸಂಸ್ಥಾಪಕ ಮತ್ತು ಎಕ್ಸ್ (ಹಿಂದೆ ಟ್ವಿಟರ್)ನ ಮಾಲೀಕರಾಗಿರುವ ಎಲೋನ್ ಮಸ್ಕ್ ಅವರ ಜೀವನಚರಿತ್ರೆ ಗ್ರಂಥವು ಸೆಪ್ಟೆಂಬರ್ 16 ರವರೆಗೆ ಮುದ್ರಿತ ಪ್ರತಿಗಳನ್ನು ಒಳಗೊಂಡಂತೆ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಗಿದೆ.
ತಮ್ಮ ಜೀವನಚರಿತ್ರೆ ಗ್ರಂಥ ಉತ್ತಮ ಮಾರಾಟವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಸ್ಕ್, "ಕೂಲ್ ಆಗಿದೆ, ಆದರೂ ನನ್ನ ಮುಖದ ಇಷ್ಟೊಂದು ಕ್ಲೋಸ್-ಅಪ್ ಚಿತ್ರಗಳನ್ನು ನೋಡುವುದು ವಿಲಕ್ಷಣವಾಗಿದೆ." ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ವಾಲ್ಟರ್ ಐಸಾಕ್ಸನ್ ಅವರು ಆಪಲ್ ಸಹ-ಸಂಸ್ಥಾಪಕ ದಿ. ಸ್ಟೀವ್ ಜಾಬ್ಸ್ ಅವರ ಜೀವನಚರಿತ್ರೆ ಗ್ರಂಥವನ್ನು ಬರೆದಿದ್ದರು. 2011ರಲ್ಲಿ ಬಿಡುಗಡೆಯಾದ ಈ ಗ್ರಂಥದ 3,83,000 ಪ್ರತಿಗಳು ಮೊದಲ ವಾರದಲ್ಲಿಯೇ ಮಾರಾಟವಾಗಿದ್ದವು. ಅಕ್ಟೋಬರ್ 5, 2011 ರಂದು ಜಾಬ್ಸ್ ನಿಧನರಾದ ಕೆಲವೇ ವಾರಗಳ ನಂತರ ಈ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಅದರ ನಂತರ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾದ ಎರಡನೇ ಆತ್ಮಚರಿತ್ರೆ ಗ್ರಂಥ ಮಸ್ಕ್ ಅವರದ್ದಾಗಿದೆ.