ಲಾಹೋರ್ :ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರಾಷ್ಟ್ರ ರಾಜಕಾರಣವನ್ನು ಹಗೆತನವಾಗಿ ಪರಿವರ್ತಿಸಿದ್ದಾರೆ. ಇಮ್ರಾನ್ ಖಾನ್ ರಾಜಕೀಯವನ್ನು ಒಂದೋ ನಾವು ಇರಬೇಕು ಅಥವಾ ಅವರು ಇರಬೇಕು ಎಂಬ ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ನ್ನು ನಮ್ಮ ಪಕ್ಷದ ಶತ್ರು ಎಂದು ಹೇಳಿದರು. ಆಡಳಿತ ಪಕ್ಷವು ತನ್ನ ಅಸ್ತಿತ್ವ ಅಪಾಯದಲ್ಲಿದೆ ಎಂದು ಭಾವಿಸಿದಾಗ, ಅದು ತನ್ನ ಮುಖ್ಯ ರಾಜಕೀಯ ಪ್ರತಿಸ್ಪರ್ಧಿಯನ್ನು ನಿಯಂತ್ರಿಸಲು ಯಾವ ಹಂತಕ್ಕೂ ಹೋಗಲು ಸಿದ್ದವಿರುತ್ತದೆ ಎಂದು ಹೇಳಿದರು. ಸಚಿವ ಸನಾವುಲ್ಲಾ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಅತ್ಯಂತ ನಿಕಟ ವ್ಯಕ್ತಿಯಾಗಿದ್ದಾರೆ.
“ಇದೀಗ ಪಾಕಿಸ್ತಾನ ರಾಜಕಾರಣವನ್ನು ಎರಡು ಪಕ್ಷಗಳ ಅಸ್ತಿತ್ವದ ಪ್ರಶ್ನೆಯನ್ನಾಗಿ ಮಾಡಿದ್ದಾರೆ. ಇಲ್ಲಿನ ರಾಜಕಾರಣದಲ್ಲಿ ಒಂದೋ ಅವರು ಇರಬೇಕು, ಇಲ್ಲ ನಾವು ಇರಬೇಕು ಎಂಬ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಪಿಟಿಐ ಅಥವಾ ಪಿಎಂಎಲ್-ಎನ್ ಪಕ್ಷದಲ್ಲಿ ಒಂದು ಮಾತ್ರ ಉಳಿಯಬೇಕು ಎಂಬ ಹಂತಕ್ಕೆ ಪಾಕ್ ರಾಜಕಾರಣ ಬಂದು ನಿಂತಿದೆ ಎಂದು ಹೇಳಿದರು. ಪಿಎಂಎಲ್- ಎನ್ ಪಕ್ಷದ ಅಸ್ತಿತ್ವವು ಈಗಾಗಲೇ ಅಪಾಯದಲ್ಲಿದೆ. ನಾವು ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಯಾವ ಹಂತಕ್ಕೂ ಹೋಗಲು ಸಿದ್ಧವಿದ್ದೇವೆ. ಖಾನ್ ಈಗ ನಮ್ಮ ಶತ್ರು. ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕೋ ಹಾಗೆ ನಡೆಸಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಖಾನ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಪಾರಾದ ಇಮ್ರಾನ್ ಖಾನ್, ತನ್ನ ಹತ್ಯೆಯ ಯತ್ನದ ಹಿಂದೆ ಸನಾವುಲ್ಲಾ ಇರುವುದಾಗಿ ಹೇಳಿದ್ದರು. ಅಲ್ಲದೆ ಹತ್ಯೆಯ ಪ್ರಯತ್ನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಹಿರಿಯ ISI ಅಧಿಕಾರಿಯ ಪಾತ್ರ ಇರುವುದಾಗಿಯೂ ಆರೋಪಿಸಿದ್ದರು.