ಅಂಕಾರಾ (ಟರ್ಕಿ):ಟರ್ಕಿ, ಸಿರಿಯಾ ದೇಶಗಳನ್ನು ನಡುಗಿಸಿದ ಭೂಕಂಪನ ಘಟಿಸಿ 6 ದಿನಗಳು ಕಳೆದಿದ್ದು, ಸಾವಿನ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಮಧ್ಯೆಯೂ ಅವಶೇಷಗಳಡಿ ಸಿಲುಕಿದ ಜನರನ್ನು ಕಾಪಾಡುವುದು ಅಸಾಧ್ಯವಾಗಿದೆ. ಜನರು ಆಹಾರ, ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ. ಇನ್ನೊಂದೆಡೆ, ಕೆಲಸದ ಮೇಲೆ ಟರ್ಕಿಗೆ ತೆರಳಿದ್ದ ಬೆಂಗಳೂರಿನ ವ್ಯಕ್ತಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಟರ್ಕಿಯ ಉಪಾಧ್ಯಕ್ಷ ಫುಅತ್ ಓಕ್ತಾಯ್, "ಭೀಕರ ಭೂಕಂಪನಕ್ಕೆ ಈವರೆಗೂ 28,192 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿಯಲ್ಲೇ 24,617 ಮಂದಿಯಾದರೆ, ಸಿರಿಯಾದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 2,167, ಸರ್ಕಾರ ನಿಯಂತ್ರಿತ ಪ್ರದೇಶದಲ್ಲಿ 1408 ಸೇರಿ 3575 ಸಾವು ಸಂಭವಿಸಿದೆ" ಎಂದು ಆರೋಗ್ಯ ಸಚಿವಾಲಯ ನೀಡಿದ ದಾಖಲೆಗಳನ್ನು ಉಲ್ಲೇಖಿಸಿದರು.
ಉತ್ತರಾಖಂಡ ವ್ಯಕ್ತಿಯ ಮೃತದೇಹ ಪತ್ತೆ:ಟರ್ಕಿಯಲ್ಲಿ ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಲ್ಲಿ ಕಾಣೆಯಾಗಿದ್ದ ಉತ್ತರಾಖಂಡ ರಾಜ್ಯದ ಪ್ರಜೆ ಈಗ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಮಲಾತ್ಯದಲ್ಲಿನ ಹೋಟೆಲ್‌ನ ಅವಶೇಷಗಳ ಅಡಿಯಲ್ಲಿ ಶವ ಸಿಕ್ಕಿದೆ ಎಂದು ಟರ್ಕಿಯ ಭಾರತೀಯ ರಾಯಭಾರ ಕಚೇರಿ ಶನಿವಾರ ಟ್ವೀಟ್ ಮೂಲಕ ತಿಳಿಸಿದೆ. ಮೃತರನ್ನು ವಿಜಯ್ಕುಮಾರ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಟರ್ಕಿಗೆ ವ್ಯಾಪಾರ ಉದ್ದೇಶಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ದುರಂತದ ಸುದ್ದಿ ಕೇಳಿ ಕುಮಾರ್ ಅವರ ಕುಟುಂಬ ಸದಸ್ಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ವಿಜಯ್ಕುಮಾರ್ ಅವರು ತಂದೆಯನ್ನು ಕಳೆದುಕೊಂಡಿದ್ದರು. ಜನವರು 22 ರಂದು ಟರ್ಕಿಗೆ ತೆರಳಿದ್ದರು. ಫೆಬ್ರವರಿ 20 ರಂದು ವಾಪಸ್ ಭಾರತಕ್ಕೆ ಬರುವ ಯೋಜನೆಯಲ್ಲಿದ್ದರು. ಆದರೆ, ವಿಧಿಯಾಟದಲ್ಲಿ ವಿಜಯ್ ಬಲಿಯಾಗಿದ್ದಾರೆ. ತಾಯಿ, ಪತ್ನಿ ಮತ್ತು ಆರು ವರ್ಷದ ಮಗುವನ್ನು ಅಗಲಿದ್ದಾರೆ.