ಟೋಕಿಯೊ(ಜಪಾನ್) :ಹೊಸ ವರ್ಷದ ಮೊದಲ ದಿನವೇ ಜಪಾನ್ನಲ್ಲಿ ತಲ್ಲಣ ಸೃಷ್ಟಿಸಿದ್ದ ಪ್ರಬಲ ಭೂಕಂಪನದಲ್ಲಿ ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ನೂರಾರು ಕಟ್ಟಡಗಳು ನೆಲಸಮವಾಗಿವೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಸಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ಇಶಿಕಾವಾ ಪ್ರದೇಶದಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದರಿಂದ ಪ್ರಾಂತ್ಯದ ನೋಟೊ ಪೆನಿನ್ಸುಲಾ ತೀವ್ರ ಹಾನಿಗೀಡಾಗಿದೆ. ಬಳಿಕ ದೊಡ್ಡ ಸುನಾಮಿ ಏಳುವ ಭೀತಿ ಉಂಟಾಗಿತ್ತು. ಬಳಿಕ ಸಣ್ಣ ಪ್ರಮಾಣದಲ್ಲಿ ಸುನಾಮಿ ಉಂಟಾಗಿ, ಕೆಲವೆಡೆ ಅನಾಹುತ ಸೃಷ್ಟಿಸಿದೆ. ಇದೇ ವೇಳೆ ಪೂರ್ವ ರಷ್ಯಾ ಭಾಗದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಹಾನಿಗೀಡಾದ ನೋಟೊ ಪೆನಿನ್ಸುಲಾದ ಉತ್ತರ ಭಾಗವು ಭೂಕಂಪದ ನಂತರ 24 ಗಂಟೆಗಳಿಗೂ ಹೆಚ್ಚು ಕಾಲ ಸಂಪರ್ಕ ಕಡಿತಗೊಂಡಿತ್ತು. ರಸ್ತೆಗಳು ಹಾನಿಯಾಗಿದ್ದು, ಕಟ್ಟಡಗಳು ಧರಾಶಾಹಿಯಾಗಿವೆ. ತೀವ್ರ ಆತಂಕ ಸೃಷ್ಟಿಸಿದ್ದ ಸುನಾಮಿಯು ಪಥ ಬದಲಿಸಿದ ಕಾರಣ ಜಪಾನ್‌ನ ಹವಾಮಾನ ಸಂಸ್ಥೆ ದೇಶದ ಪಶ್ಚಿಮ ಕರಾವಳಿಯ ಭಾಗಗಳಲ್ಲಿ ನೀಡಿದ್ದ ಎಚ್ಚರಿಕೆಯನ್ನು ಮಂಗಳವಾರ ವಾಪಸ್ ಪಡೆದಿತ್ತು.
ವೈಮಾನಿಕ, ಜಲಮಾರ್ಗದ ಮೂಲಕ ನೆರವು:ಪ್ರಕೃತಿ ವಿಕೋಪದ ಬಳಿಕ ಸರ್ಕಾರ ವಿಪತ್ತು ತುರ್ತು ಸಭೆ ನಡೆಸಿತು. ಹಾನಿಗೀಡಾದ ಪ್ರದೇಶಕ್ಕೆ ತುರ್ತು ನೆರವು ನೀಡಲು ಸೂಚಿಸಿತು. ಬಳಿಕ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರು ಅಲ್ಲಿನ ರಸ್ತೆಗಳು ತೀವ್ರ ಹಾನಿಗೀಡಾಗಿದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ. ವಾಯುಮಾರ್ಗದ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.