ಲಿಲೋಂಗ್ವೆ (ಮಲಾವಿ): ಫ್ರೆಡ್ಡಿ ಎಂಬ ಉಷ್ಣವಲಯ ಚಂಡಮಾರುತದ ಅಬ್ಬರಕ್ಕೆ ಆಫ್ರಿಕಾ ಖಂಡದ ಆಗ್ನೇಯ ಭಾಗದಲ್ಲಿರುವ ಪುಟ್ಟ ದೇಶ ಮಲಾವಿ ತತ್ತರಿಸಿದೆ. ಸಾವಿನ ಸಂಖ್ಯೆ 1,000ದ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲಾವಿಯ ವಿಪತ್ತು ನಿರ್ವಹಣಾ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರೆದಿದೆ. ಇದುವರೆಗೆ ಹಲವು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿರುವ ಕುರಿತು ತಿಳಿಸಿದೆ.
ಕಳೆದ ಸೋಮವಾರ ಒಟ್ಟು 499 ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. ಮಂಗಳವಾರದಂದು ಈ ಸಂಖ್ಯೆ 507ಕ್ಕೆ ತಲುಪಿದೆ. ಸೋಮವಾರ 427 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಮಂಗಳವಾರ ಈ ಸಂಖ್ಯೆ 537ಕ್ಕೇರಿದೆ. ಇದುವರೆಗೂ ಒಟ್ಟು 1,332 ಮಂದಿ ಚಂಡಮಾರುತದಿಂದ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಂಡಮಾರುತದಿಂದ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆ 5,08,244 ರಿಂದ 5,53,614 ರಷ್ಟಿದೆ. ಹೆಚ್ಚಿದ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಒಂಬತ್ತು ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸದ್ಯ ನಿರಾಶ್ರಿತರಿಗಾಗಿ ಒಟ್ಟು ಶಿಬಿರಗಳನ್ನು 543ಕ್ಕೆ ತರಲಾಗಿದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಫ್ರೆಡ್ಡಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮಲಾವಿ ಪೊಲೀಸರು ಹಾಗೂ ರಕ್ಷಣಾ ಪಡೆ ಭರದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಯಲ್ಲಿ ಬ್ರಿಟಿಷ್, ಜಾಂಬಿಯನ್ ಮತ್ತು ತಾಂಜೇನಿಯಾದ ತಜ್ಞರು ಪಾಲ್ಗೊಂಡಿದ್ದಾರೆ. ಚಂಡಮಾರುತದಿಂದ ತೊಂದರೆಗೀಡಾಗಿರುವ ಮಲಾವಿಗೆ ನೆರೆಯ ಹಲವು ದೇಶಗಳು ಧಾವಿಸಿವೆ. ವಿಶ್ವಸಂಸ್ಥೆ, ಇತರ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಮಾನವೀಯ ನೆರವು ಮತ್ತು ಬೆಂಬಲವು ಹರಿದುಬರುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.