ಬ್ಯಾಂಕಾಕ್: ಚೀನಾದ ವಾಯುಪಡೆಯು ಭಾನುವಾರ ಥಾಯ್ಲೆಂಡ್ ಮಿಲಿಟರಿಯೊಂದಿಗೆ ನಡೆಯಲಿರುವ ಜಂಟಿ ಸಮರಾಭ್ಯಾಸಕ್ಕಾಗಿ ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳನ್ನು ಥೈಲ್ಯಾಂಡ್ಗೆ ಕಳುಹಿಸುತ್ತಿದೆ. ಆಕಾಶಮಾರ್ಗದಿಂದ ಬೆಂಬಲ ನೀಡುವುದು, ಭೂಮಿಯ ಮೇಲಿನ ಗುರಿಗಳ ಮೇಲೆ ದಾಳಿ ನಡೆಸುವುದು ಮತ್ತು ಸಣ್ಣ ಮತ್ತು ದೊಡ್ಡ ಪ್ರಮಾಣದ ಸೈನಿಕರ ನಿಯೋಜನೆಗಳನ್ನು ಈ ಮಿಲಿಟರಿ ಅಭ್ಯಾಸ ಒಳಗೊಂಡಿರುತ್ತದೆ ಎಂದು ಚೀನಾದ ರಕ್ಷಣಾ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಸ್ತರಿಸುತ್ತಿರುವ ಮಿಲಿಟರಿ ಚಟುವಟಿಕೆಗಳು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇದು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವೆ ಸ್ಪರ್ಧೆ ತಾರಕಕ್ಕೇರುತ್ತಿರುವ ಸಂಕೇತವಾಗಿದೆ. ಫಾಲ್ಕನ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆಯು ಲಾವೋಸ್ ಗಡಿಯ ಬಳಿ ಉತ್ತರ ಥಾಯ್ಲೆಂಡ್ನ ಉಡಾರ್ನ್ ರಾಯಲ್ ಥಾಯ್ ಏರ್ ಫೋರ್ಸ್ ಬೇಸ್‌ನಲ್ಲಿ ನಡೆಯಲಿದೆ. ಥಾಯ್ ಯುದ್ಧ ವಿಮಾನಗಳು ಮತ್ತು ಉಭಯ ದೇಶಗಳ ವಾಯುಮಾರ್ಗ ಮುನ್ನೆಚ್ಚರಿಕೆ ವಿಮಾನಗಳು ಸಹ ಭಾಗವಹಿಸಲಿವೆ.
ಈ ಪ್ರದೇಶದಲ್ಲಿ ತನ್ನ ಮೈತ್ರಿಕೂಟದ ಹಿತಾಸಕ್ತಿ ಮತ್ತು ಪಾಲುದಾರಿಕೆಗಳ ಜಾಲವನ್ನು ಬಲಪಡಿಸುವ ಪ್ರಯತ್ನದ ಭಾಗವಾಗಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಜೂನ್‌ನಲ್ಲಿ ಥಾಯ್ಲೆಂಡ್ಗೆ ಭೇಟಿ ನೀಡಿದ್ದರು. ಇಂಡೋನೇಷ್ಯಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಸಿಂಗಾಪುರದೊಂದಿಗೆ ಇಂಡೋನೇಷ್ಯಾದಲ್ಲಿ ಅಮೆರಿಕವು ಮಿಲಿಟರಿ ಅಭ್ಯಾಸಗಳನ್ನು ನಡೆಸುತ್ತಿದೆ. 2009 ರಿಂದ ಸೂಪರ್ ಗರುಡಾ ಶೀಲ್ಡ್ ಹೆಸರಿನಲ್ಲಿ ಅಮೆರಿಕ ಈ ಮಿಲಿಟರಿ ಅಭ್ಯಾಸಗಳನ್ನು ನಡೆಸುತ್ತಿದೆ. ಇದರ ಬೆನ್ನಲ್ಲೇ ಈಗ ಚೀನಾ ಮತ್ತು ಥೈಲ್ಯಾಂಡ್ಗಳು ಮಿಲಿಟರಿ ಅಭ್ಯಾಸ ನಡೆಸಲಿವೆ.
ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಚೀನಾ ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ಸ್ವಯಂ ಆಡಳಿತ ಹೊಂದಿರುವ ದ್ವೀಪರಾಷ್ಟ್ರ ತೈವಾನ್ಗೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ, ಚೀನಾ ತನ್ನ ಯುದ್ಧನೌಕೆಗಳು, ಕ್ಷಿಪಣಿಗಳು ಮತ್ತು ವಿಮಾನಗಳನ್ನು ತೈವಾನ್ ಸುತ್ತಮುತ್ತಲಿನ ಸಮುದ್ರ ತೀರಗಳಿಗೆ ಮತ್ತು ವಾಯುಮಾರ್ಗಗಳಿಗೆ ಕಳುಹಿಸಿ ತೈವಾನ್ ದೇಶವನ್ನು ಬೆದರಿಸುವ ಪ್ರಯತ್ನಗಳನ್ನು ಮುಂದುವರೆಸಿದೆ.
ಇದನ್ನು ಓದಿ:ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಸ್ಥಿತಿ ಗಂಭೀರ.. ಕಣ್ಣು ಯಕೃತ್ಗೆ ತೀವ್ರ ಹಾನಿ