ನವದೆಹಲಿ:ಚೀನಾ ಮತ್ತು ಭಾರತದ ಮಧ್ಯೆ ಸಂಬಂಧ ಹಳಸಿದ್ದು, ಉಭಯ ದೇಶಗಳು ಪರಸ್ಪರ ಹಲವು ನಿರ್ಬಂಧಗಳನ್ನು ಹೇರುತ್ತಿವೆ. ಇದೇ ಹಾದಿಯಲ್ಲಿ ಚೀನಾದಲ್ಲಿರುವ ಭಾರತೀಯ ವರದಿಗಾರರನ್ನು ದೇಶದಿಂದ ಹೊರ ಹೋಗಲು ಆಗ್ರಹಿಸಿದ್ದು, ಉಳಿದ ಒಬ್ಬ ಪತ್ರಕರ್ತನ ವೀಸಾ ನವೀಕರಣವನ್ನು ನಿರಾಕರಿಸಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಗಾರರಿಗೆ ಈ ತಿಂಗಳಾಂತ್ಯಕ್ಕೆ ದೇಶ ತೊರೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಏಷ್ಯಾದ ಎರಡು ದೊಡ್ಡ ಆರ್ಥಿಕ ಶಕ್ತ ರಾಷ್ಟ್ರಗಳ ಮಧ್ಯೆ ಮುನಿಸು ಜೋರಾಗಿದ್ದು, ಅದು ಮಾಧ್ಯಮದ ಮೇಲೂ ಪ್ರಭಾವ ಬೀರಿದೆ. ಹೀಗಾಗಿ ಚೀನಾದಲ್ಲಿನ ಕೊನೆಯ ಭಾರತೀಯ ಪತ್ರಕರ್ತನನ್ನು ದೇಶ ತೊರೆಯುವಂತೆ ಸೂಚಿಸಲಾಗಿದೆ. ಆದರೆ, ಭಾರತದಲ್ಲಿನ ಚೀನಾದ ವರದಿಗಾರರು ಯಾವುದೇ ನಿರ್ಬಂಧವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.
ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ನಾಲ್ಕು ಭಾರತೀಯ ವರದಿಗಾರರು ಇದ್ದರು. ಮಾರ್ಚ್ನಲ್ಲಿ ಇಬ್ಬರು ಖಾಸಗಿ ಮಾಧ್ಯಮದ ವರದಿಗಾರರ ವೀಸಾ ನವೀಕರಣವನ್ನು ನಿರಾಕರಿಸಿದ್ದರಿಂದ ಅವರು ನಿರ್ಗಮಿಸಿದ್ದರು. ಅದಾದ ನಂತರ ಇನ್ನೊಬ್ಬ ಪತ್ರಕರ್ತ ಕೂಡ ಕಳೆದ ವಾರವಷ್ಟೇ ಡ್ರ್ಯಾಗನ್ ರಾಷ್ಟ್ರದಿಂದ ವಾಪಸ್ ಆಗಿದ್ದರು. ಹೀಗಾಗಿ ಉಳಿದ ಒಬ್ಬ ಪತ್ರಕರ್ತನ ಮೇಲೆ ಚೀನಾ ಅಧಿಕಾರಿಗಳು ದೇಶ ತೊರೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತತೆಗೆ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಚೀನಾ ವಿದೇಶಾಂಗ ಕಚೇರಿ ಪ್ರತಿಕ್ರಿಯೆ ನೀಡಿಲ್ಲ.
ಚೀನಾ ಖ್ಯಾತೆ:ಕಳೆದ ತಿಂಗಳಷ್ಟೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಭಾರತದಲ್ಲಿ ಒಬ್ಬ ಚೀನೀ ಪತ್ರಕರ್ತ ಉಳಿದಿದ್ದಾರೆ. ಅವರು ಇನ್ನೂ ತಮ್ಮ ವೀಸಾ ನವೀಕರಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೂ ಮೊದಲು, ಚೀನಾದ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಮತ್ತು ಸೆಂಟ್ರಲ್ ಟೆಲಿವಿಷನ್‌ನ ಇಬ್ಬರು ಪತ್ರಕರ್ತರು ಸಲ್ಲಿಸಿದ್ದ ವೀಸಾ ನವೀಕರಣ ಅರ್ಜಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಭಾರತದ ಸ್ಪಷ್ಟನೆ:ಆದರೆ, ಚೀನಾದ ವರದಿಗಾರರು ಯಾವುದೇ ತೊಂದರೆಯಿಲ್ಲದೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಹೇಳಿತ್ತು. ಆದರೆ, ಚೀನಾದಲ್ಲಿರುವ ಭಾರತೀಯ ಪತ್ರಕರ್ತರಿಗೆ ಇದು ವ್ಯತಿರಿಕ್ತವಾಗಿದೆ. ಉಭಯ ದೇಶಗಳು ಈ ವಿಷಯದ ಬಗ್ಗೆ ಸಂಪರ್ಕದಲ್ಲಿವೆ ಎಂದು ಅದು ಹೇಳಿತ್ತು.