ಬೀಜಿಂಗ್ :ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಚೀನಾದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಬೆಳೆದಿದೆ. ಕೋವಿಡ್ ನಿರ್ಬಂಧಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಚೀನಾದ ಆರ್ಥಿಕತೆಗೆ ವೇಗ ಬಂದಿದೆ. ಹೆಚ್ಚುತ್ತಿರುವ ಕೌಟುಂಬಿಕ ಖರ್ಚು ಮತ್ತು ಕಾರ್ಖಾನೆಗಳಲ್ಲಿ ಉತ್ಪಾದನಾ ಚಟುವಟಿಕೆ ಹೆಚ್ಚುತ್ತಿರುವುದು ಆರ್ಥಿಕತೆಯ ಬೆಳವಣಿಗೆಯ ಸಂಕೇತ ನೀಡಿವೆ. ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರ ತನ್ನ ಆರ್ಥಿಕತೆಯನ್ನು ಮರಳಿ ಹಳಿಗೆ ತರುವುದಾಗಿ ಬೀಜಿಂಗ್ ಹೇಳಿಕೊಂಡಿತ್ತು. ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವುದು ಗಮನಾರ್ಹ.
ಮಾರ್ಚ್‌ನ ಪ್ರತ್ಯೇಕ ಅಂಕಿಅಂಶಗಳ ಪ್ರಕಾರ ಕೌಟುಂಬಿಕ ವೆಚ್ಚಗಳಿಗೆ ಮುಖ್ಯ ಸೂಚಕವಾದ ಚಿಲ್ಲರೆ ಮಾರಾಟವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 10.6 ರಷ್ಟು ಏರಿಕೆಯಾಗಿದೆ ಎಂಬುದನ್ನು ತೋರಿಸಿದೆ. ಅದೇ ಸಮಯದಲ್ಲಿ, ದೇಶದ ಕಾರ್ಖಾನೆಗಳಲ್ಲಿನ ಉತ್ಪಾದನೆಯು ಶೇ 3.9 ರಷ್ಟು ಏರಿಕೆಯಾಗಿದೆ. ಆದರೂ ಇದು ಸ್ವಲ್ಪಮಟ್ಟಿಗೆ ನಿರೀಕ್ಷೆಯ ಮಟ್ಟದಲ್ಲಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಾರಣವೇನು?: ದೇಶದ ವಿಮಾನಯಾನ ಉದ್ಯಮ ಕೂಡ ವ್ಯಾಪಕವಾದ ಬೆಳವಣಿಗೆ ದಾಖಲಿಸುತ್ತಿರುವುದು ಗಮನಾರ್ಹ. ಕಳೆದ ತಿಂಗಳು 45 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಚೀನಾ ಸಿವಿಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಂಕಿಅಂಶಗಳು ತೋರಿಸಿವೆ. ವಿಮಾನ ಪ್ರಯಾಣಿಕರ ಸಂಖ್ಯೆಯು ಕಳೆದ ವರ್ಷ ಇದೇ ಸಮಯಕ್ಕೆ ಇದ್ದುದಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಸರ್ಕಾರವು ಕೊರೊನಾವೈರಸ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಚೀನಾದ ಆರ್ಥಿಕ ಚೇತರಿಕೆಯ ಬಗ್ಗೆ ಜಗತ್ತು ಕಾಯುತ್ತಿತ್ತು. ಬೀಜಿಂಗ್ ದೊಡ್ಡ ತಂತ್ರಜ್ಞಾನ ಕಂಪನಿಗಳು ಮತ್ತು ಪ್ರಾಪರ್ಟಿ ಡೆವಲಪರ್‌ಗಳ ಮೇಲೆ ವಿಧಿಸಿದ್ದ ಮೂರು ವರ್ಷಗಳ ಅವಧಿಯ ನಿರ್ಬಂಧವನ್ನು ಕೂಡ ಸಡಿಲಿಸಿದೆ ಎಂದು ವರದಿಯಾಗಿದೆ.