ಢಾಕಾ: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕರೆ ನೀಡಿರುವ 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್ ಆರಂಭವಾಗುವುದಕ್ಕೂ ಮುಂಚೆ ಢಾಕಾ ಮತ್ತು ದೇಶದ ಇತರ ಭಾಗಗಳಲ್ಲಿ 10ಕ್ಕೂ ಹೆಚ್ಚು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಢಾಕಾದಲ್ಲಿ ನಡೆದ ವಿಧ್ವಂಸಕ ಕೃತ್ಯ, ಹಿಂಸಾಚಾರ ಮತ್ತು ಪೊಲೀಸರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಗೃಹ ಸಚಿವ ಮತ್ತು ಪ್ರಸ್ತುತ ಬಿಎನ್‌ಪಿ ಉಪಾಧ್ಯಕ್ಷ, ಏರ್ ವೈಸ್ ಮಾರ್ಷಲ್ (ನಿವೃತ್ತ) ಅಲ್ತಾಫ್ ಹುಸೇನ್ ಚೌಧರಿ ಅವರನ್ನು ಬಂಧಿಸಲಾಗಿದೆ.
ಪೊಲೀಸ್ ಕಾನ್ಸ್ಟೆಬಲ್ ಅಮಿರುಲ್ ಇಸ್ಲಾಂ ಪರ್ವೇಜ್ ಹತ್ಯೆ ಪ್ರಕರಣದಲ್ಲಿ ಬಿಎನ್‌ಪಿ ಸ್ಥಾಯಿ ಸಮಿತಿ ಸದಸ್ಯ ಮತ್ತು ಮಾಜಿ ವಾಣಿಜ್ಯ ಸಚಿವ ಅಮೀರ್ ಖೋಸ್ರು ಮಹಮೂದ್ ಚೌಧರಿ ಮತ್ತು ಬಿಎನ್‌ಪಿ ಮಾಧ್ಯಮ ಘಟಕದ ಸಂಚಾಲಕ ಜಹೀರ್ ಉದ್ದೀನ್ ಸ್ವಪನ್ ಅವರನ್ನು ಢಾಕಾ ನ್ಯಾಯಾಲಯ ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದಕ್ಕೂ ಮುನ್ನ ಶನಿವಾರ ಸಂಜೆ 7:30 ರಿಂದ 8 ಗಂಟೆಯ ನಡುವೆ ಎಲಿಫೆಂಟ್ ರಸ್ತೆ, ನ್ಯೂಮಾರ್ಕೆಟ್ ಮತ್ತು ಸೈದಾಬಾದ್ ಪ್ರದೇಶಗಳಲ್ಲಿ ಮೂರು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದೆ.
ಗಲಭೆಕೋರರು ನ್ಯೂಮಾರ್ಕೆಟ್ ಪ್ರದೇಶದ ಗೌಚಿಯಾ ಮಾರುಕಟ್ಟೆಯ ಬಳಿ ಮಿರ್ಪುರ್ ಲಿಂಕ್ ಬಸ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ನಂತರ, ಅಗ್ನಿಶಾಮಕ ಸೇವೆಯ ಎರಡು ಘಟಕಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಇದಾಗಿ ಐದು ನಿಮಿಷಗಳ ನಂತರ, ಎಲಿಫೆಂಟ್ ರಸ್ತೆಯ ಮಲ್ಟಿಪ್ಲಾನ್ ಸಿಟಿ ಸೆಂಟರ್ ಮುಂದೆ ಗ್ರೀನ್ ಯೂನಿವರ್ಸಿಟಿ ಬಸ್ ಗೆ ಬೆಂಕಿ ಹಚ್ಚಲಾಯಿತು. ನಂತರ ಸೈದಾಬಾದ್ ಟೌನ್ಶಿಪ್ ಜಂಕ್ಷನ್ನ ಫ್ಲೈಓವರ್ ಕೆಳಗೆ ಮತ್ತೊಂದು ಬಸ್ಗೆ ಬೆಂಕಿ ಹಚ್ಚಲಾಗಿದೆ.