ಕರ್ನಾಟಕ

karnataka

By

Published : May 6, 2023, 11:06 AM IST

ETV Bharat / international

ಅಮೆರಿಕದ ದೇಶೀಯ ನೀತಿ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ಟಂಡೆನ್ ಆಯ್ಕೆ

ಜೋ ಬೈಡನ್ ಅವರು ಭಾರತೀಯ-ಅಮೆರಿಕನ್ ಮೂಲದ ನೀರಾ ಟಂಡೆನ್ ಅವರನ್ನು ಅಮೆರಿಕದ ಹೊಸ ದೇಶೀಯ ನೀತಿ ಸಲಹೆಗಾರರಾಗಿ ಆಯ್ಕೆ ಮಾಡಿದ್ದಾರೆ.

neera tanden
ನೀರಾ ಟಂಡೆನ್

ವಾಷಿಂಗ್ಟನ್: ಮಾಜಿ ರಾಯಭಾರಿ ಸುಸಾನ್ ರೈಸ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಹಿನ್ನೆಲೆ ಅಧ್ಯಕ್ಷರ ಸಹಾಯಕ ಮತ್ತು ದೇಶೀಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲು ಭಾರತೀಯ - ಅಮೆರಿಕನ್ ಮೂಲದ ನೀರಾ ಟಂಡೆನ್ ಅವರನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ಅಧ್ಯಕ್ಷ ಬೈಡನ್ ಮತ್ತು ಸಿಬ್ಬಂದಿ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಟಂಡೆನ್ ಅವರು, ಶ್ವೇತಭವನದ ಮೂರು ಪ್ರಮುಖ ನೀತಿ ಮಂಡಳಿಗಳನ್ನು ಮುನ್ನಡೆಸಿದ ಮೊದಲ ಏಷಿಯನ್​ - ಅಮೆರಿಕನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಈ ಕುರಿತು ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್​, "ನೀರಾ ಟಂಡೆನ್ ಅವರು ಆರ್ಥಿಕತೆ, ಜನಾಂಗೀಯ ಸಮಾನತೆ, ಆರೋಗ್ಯ, ರಕ್ಷಣೆ, ವಲಸೆ ಮತ್ತು ಶಿಕ್ಷಣ ಸೇರಿದಂತೆ ದೇಶೀಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಇನ್ನುಮುಂದೆ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಹೇಳಿದರು.

ಬೈಡನ್ ಅವರು ಆರಂಭದಲ್ಲಿ ಟಂಡೆನ್ ಅವರನ್ನು ಕಛೇರಿ ಆಫ್ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಮುಖ್ಯಸ್ಥರಾಗಿ ನಾಮನಿರ್ದೇಶನ ಮಾಡಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ಅವರ ನಾಮನಿರ್ದೇಶನವನ್ನು ಹಿಂಪಡೆಯಲಾಯಿತು. ಒಬಾಮಾ ಮತ್ತು ಕ್ಲಿಂಟನ್ ಆಡಳಿತಗಳಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ, ಟಂಡೆನ್ ಅವರು ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ ಮತ್ತು ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ ಆಕ್ಷನ್ ಫಂಡ್‌ನ ಅಧ್ಯಕ್ಷರಾಗಿ ಮತ್ತು ಸಿಇಒ ಆಗಿದ್ದರು.

ಟಂಡೆನ್, ಈ ಹಿಂದೆ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶ್ವೇತಭವನದಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಆರೋಗ್ಯ ಸುಧಾರಣಾ ತಂಡದಲ್ಲಿ ಸಹ ಕೆಲಸ ಮಾಡಿದ್ದಾರೆ. ಅದಕ್ಕೂ ಮೊದಲು, ಒಬಾಮಾ - ಬೈಡನ್ ಅಧ್ಯಕ್ಷೀಯ ಪ್ರಚಾರಕ್ಕಾಗಿ ದೇಶೀಯ ನೀತಿಯ ನಿರ್ದೇಶಕರಾಗಿದ್ದರು ಮತ್ತು ಹಿಲರಿ ಕ್ಲಿಂಟನ್ ಅಧ್ಯಕ್ಷೀಯ ಪ್ರಚಾರಕ್ಕಾಗಿ ನೀತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಇದನ್ನೂ ಓದಿ :ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ: ಖಲಿಸ್ತಾನಿಗಳಿಂದ ಕೃತ್ಯದ ಶಂಕೆ

"ನೀರಾ ಟಂಡೆನ್ ಅವರು ದೇಶೀಯ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ತಂಡಗಳ ಹಿರಿಯ ಸಲಹೆಗಾರರಾಗಿ ಮತ್ತು ಸಿಬ್ಬಂದಿ ಕಾರ್ಯದರ್ಶಿಯಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಭಾಗಿಯಾಗಲಿದ್ದಾರೆ. ಅವರು ಸಾರ್ವಜನಿಕ ನೀತಿಯಲ್ಲಿ 25 ವರ್ಷಗಳ ಅನುಭವ ಹೊಂದಿದ್ದು, ಮೂವರು ಅಧ್ಯಕ್ಷರೊಂದಿಗೆ ಕೆಲಸ ನಿರ್ವಹಿಸಿದ್ದಾರೆ. ಮತ್ತು ಸುಮಾರು ಒಂದು ದಶಕದಿಂದ ದೇಶದ ಅತಿದೊಡ್ಡ ಥಿಂಕ್ ಟ್ಯಾಂಕ್‌ಗಳಲ್ಲಿ ಒಂದನ್ನು ಮುನ್ನಡೆಸಿದ್ದಾರೆ" ಎಂದು ವೈಟ್ ಹೌಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ದೇಶೀಯ ನೀತಿ : ದೇಶೀಯ ನೀತಿಯು ರಾಜ್ಯದ ಗಡಿಯೊಳಗಿನ ಎಲ್ಲಾ ಸಮಸ್ಯೆಗಳು ಮತ್ತು ಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿದ ಆಡಳಿತಾತ್ಮಕ ನಿರ್ಧಾರಗಳನ್ನು ಮೇಲ್ವಿಚಾರಣೆ ಮಾಡುವ ಒಂದು ರೀತಿಯ ಸಾರ್ವಜನಿಕ ನೀತಿಯಾಗಿದೆ. ಇದು ವಿದೇಶಿ ನೀತಿಯಿಂದ ಭಿನ್ನವಾಗಿದೆ ಮತ್ತು ಬಾಹ್ಯ ರಾಜಕೀಯದಲ್ಲಿ ಸರ್ಕಾರವು ತನ್ನ ಹಿತಾಸಕ್ತಿಗಳನ್ನು ಮುನ್ನಡೆಸುವ ವಿಧಾನಗಳನ್ನು ಸೂಚಿಸುತ್ತದೆ.

ABOUT THE AUTHOR

...view details