ಕರ್ನಾಟಕ

karnataka

By

Published : Feb 15, 2023, 1:50 PM IST

ETV Bharat / international

ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ: ಅಮೆರಿಕದ ಪ್ರತಿಕ್ರಿಯೆ ಹೀಗಿದೆ

ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೋರೇಷನ್- ಬಿಬಿಸಿ ಚಿತ್ರಿಸಿದ ಸಾಕ್ಷ್ಯಚಿತ್ರದ ಪ್ರಸಾರ ನಿಷೇಧ- ಭಾರತದಲ್ಲಿನ ಬಿಬಿಸಿ ಕಚೇರಿಗಳ ಮೇಲೆ ದಾಳಿ- ಬಿಬಿಸಿ ಮೇಲೆ ನಡೆದಿದ್ದ ಐಟಿ ದಾಳಿ- ತೆರಿಗೆ ಇಲಾಖೆ ಅಧಿಕಾರಿಗಳು- ಬಿಬಿಸಿ ಮೇಲೆ ದಾಳಿ ಬಗ್ಗೆ ಅಮೆರಿಕ

bbc-raid
ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ

ವಾಷಿಂಗ್ಟನ್:ಗೋಧ್ರೋತ್ತರ ಗಲಭೆಗಳ ಬಗ್ಗೆ ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೋರೇಷನ್​(ಬಿಬಿಸಿ) ಚಿತ್ರಿಸಿದ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತದಲ್ಲಿ ನಿಷೇಧಿಸಿದ್ದನ್ನು ಪರೋಕ್ಷವಾಗಿ ವಿರೋಧಿಸಿದ್ದ ಅಮೆರಿಕ, ಈಗ ದೆಹಲಿಯ ಬಿಬಿಸಿ ಕಚೇರಿಯ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡಲು ಹಿಂಜರಿದಿದೆ.

ದಾಳಿ ನಡೆಸಿರುವುದು ಲೆಕ್ಕಪತ್ರ ಪರಿಶೀಲನೆಗೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ದಾಳಿಯ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರ ನೆಡ್​ಪ್ರೈಸ್, ಬಿಬಿಸಿ ಕಚೇರಿಯ ಮೇಲೆ ತೆರಿಗೆ ಇಲಾಖೆ ನಡೆಸಿರುವ ಲೆಕ್ಕಪತ್ರ ಪರಿಶೋಧನೆಯನ್ನು ಸರಿ ತಪ್ಪು ಎಂದು ನಿರ್ಣಯಿಸಲು ಸಾಧ್ಯವಿಲ್ಲ. ತೆರಿಗೆ ವಂಚನೆ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತೀಯ ತೆರಿಗೆ ಅಧಿಕಾರಿಗಳು ದೆಹಲಿಯಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ತನಿಖೆ ನಡೆಸಿರುವುದು ನಮಗೆ ತಿಳಿದಿದೆ. ಇದರಾಚೆಗೆ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಪ್ರಾಮುಖ್ಯತೆಯನ್ನು ಬೆಂಬಲಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಮಾನವ ಹಕ್ಕುಗಳ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ನಾವು ನಂಬಿದ್ದೇವೆ. ಇವುಗಳಿಂದ ವಿಶ್ವದಾದ್ಯಂತ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯ. ಅಮೆರಿಕದಲ್ಲಿ ಮಾಧ್ಯಮ ಸ್ವಾತಂತ್ರ್ಯ ದೇಶವನ್ನು ಬಲಪಡಿಸಿದೆ. ಅದೇ ರೀತಿ ಭಾರತಕ್ಕೂ ಇದು ಅನುಕೂಲವಾಗಬಹುದು ಎಂದು ಹೇಳಿರುವುದಾಗಿ ವರದಿಯಾಗಿದೆ.

ಮಾಧ್ಯಮ ಹಕ್ಕು ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವಗಳ ತಳಹದಿಯಾಗಿದೆ ಎಂದು ನೆಡ್​ಪ್ರೈಸ್ ಪ್ರತಿಪಾದಿಸಿದರು. ಬಿಬಿಸಿ ಮೇಲಿನ ಈ ದಾಳಿ ಪ್ರಜಾಪ್ರಭುತ್ವದ ಕೆಲವು ಸ್ಪೂರ್ತಿ ಅಥವಾ ಮೌಲ್ಯದ ವಿರುದ್ಧವಾಗಿದೆಯೇ ಎಂಬ ಪ್ರಶ್ನೆಗೆ, ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದರ ಸತ್ಯಾಸತ್ಯತೆಗಳ ನಿರ್ಣಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಬಿಸಿ ಮೇಲೆ ನಡೆದಿದ್ದ ಐಟಿ ದಾಳಿ:ದೇಶದ ವಿವಿಧೆಡೆ ಇರುವ ಆಂಗ್ಲ ಮಾಧ್ಯಮವಾದ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ನಿನ್ನೆ ದಾಳಿ ನಡೆಸಿತ್ತು. ಆದಾಯ ತೆರಿಗೆ ಇಲಾಖೆಯ ಅಧಿಕಾರಗಳ ತಂಡ ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿತ್ತು. ತೆರಿಗೆ ವಂಚನೆ ತನಿಖೆಯ ಭಾಗವಾಗಿ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

2002 ರಲ್ಲಿ ನಡೆದ ಗುಜರಾತ್ ಗಲಭೆಗಳ ಕುರಿತಾಗಿ ಎರಡು ಕಂತುಗಳಲ್ಲಿ ಬಿಬಿಸಿ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡಿತ್ತು. ಇದರ ಬಳಿಕ ಭಾರತದಲ್ಲಿರುವ ಅದರ ಕಚೇರಿಗಳ ಮೇಲೆ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು ಮತ್ತು ಅದರ ಭಾರತೀಯ ಕಚೇರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಸಿ ಚಿತ್ರಿಸಿದ ಸಾಕ್ಷ್ಯಚಿತ್ರವನ್ನು ಸಾಕ್ಷ್ಯಚಿತ್ರವನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಬಿಬಿಸಿ ಸಾಕ್ಷ್ಯಚಿತ್ರದೊಂದಿಗೆ ಆದಾಯ ತೆರಿಗೆ ದಾಳಿಯನ್ನು ಲಿಂಕ್​ ಮಾಡುವ ಮೂಲಕ ಕೇಂದ್ರದ ವಿರುದ್ಧ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ಓದಿ:ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, ಪರಿಶೀಲನೆ: ಕಾಂಗ್ರೆಸ್​ ಟೀಕಾಪ್ರಹಾರ

ABOUT THE AUTHOR

...view details