ಕರ್ನಾಟಕ

karnataka

ETV Bharat / international

2023ರ ಮಾಲ್ಡೀವ್ಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ವಿರೋಧಿ ಪ್ರಚಾರ: ವರದಿ - ಭಾರತ ವಿರೋಧಿ ಹೇಳಿಕೆ

ಮಾಲ್ಡೀವ್ಸ್​ನ ಈಗಿನ ಸರ್ಕಾರವು 2023ರ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ವಿರೋಧಿ ಅಂಶಗಳನ್ನು ಭಿತ್ತರಿಸಿತ್ತು ಎಂದು ವರದಿಯೊಂದು ತಿಳಿಸಿದೆ.

ಭಾರತ ವಿರೋಧಿ ಪ್ರಚಾರ
ಭಾರತ ವಿರೋಧಿ ಪ್ರಚಾರ

By PTI

Published : Jan 11, 2024, 8:31 AM IST

ಲಂಡನ್:ಮಾಲ್ಡೀವ್ಸ್​ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಅಲ್ಲಿನ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಬೀಜಾಂಕುರವಾಗಿತ್ತು. ಚುನಾವಣೆಯ ಮುಖ್ಯ ಅಂಶವೇ ಭಾರತ ವಿರೋಧಿಯಾಗಿತ್ತು ಎಂಬ ಮಹತ್ವದ ಅಂಶ ಹೊರಬಿದ್ದಿದೆ.

ಮಾಲ್ಡೀವ್ಸ್​ನಲ್ಲಿ ಈಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಮತ್ತು ಪೀಪಲ್ಸ್ ನ್ಯಾಶನಲ್ ಕಾಂಗ್ರೆಸ್ (ಪಿಎನ್‌ಸಿ) ಒಕ್ಕೂಟ ಯಶ ಕಂಡಿದೆ. ಮೊಹಮದ್​ ಮುಯಿಝು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವೆರಡೂ ಪಕ್ಷಗಳು ದೇಶದಲ್ಲಿ ಭಾರತ ವಿರೋಧಿ ಪ್ರಚಾರ ನಡೆಸಿ ಅಧಿಕಾರಕ್ಕೆ ಬಂದಿವೆ ಎಂದು ಯುರೋಪಿಯನ್ ಯೂನಿಯನ್ ಪ್ರಕಟಿಸಿದ ವರದಿಯಲ್ಲಿದೆ.

ವಿಕಸಿತ ಭಾರತದ ಪ್ರಭಾವ, ಭಾರತೀಯ ಸೇನಾ ತುಕಡಿಯ ಬಗೆಗಿನ ಆತಂಕ ಸೇರಿದಂತೆ ಅನೇಕ ವಿಚಾರಗಳಲ್ಲಿ ಜನರಲ್ಲಿ ವಿರೋಧಿ ಭಾವನೆ ಹುಟ್ಟುವಂತೆ ಮಾಡಲಾಗಿದೆ. ದೇಶದ ಮೇಲೆ ಭಾರತ ಹಿಡಿತ ಸಾಧಿಸಲಿದೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ಭಿತ್ತರಿಸಲಾಗಿದೆ ಎಂದು ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆಗಳ ಕುರಿತು ಮಾಲ್ಡೀವ್ಸ್‌ಗೆ ಯುರೋಪಿಯನ್ ಚುನಾವಣಾ ವೀಕ್ಷಣಾ ಮಿಷನ್ ಮಂಗಳವಾರ ನೀಡಿದ ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುರೋಪಿಯನ್​ ಯೂನಿಯನ್​ 11 ವಾರಗಳ ಅವಲೋಕನ ನಡೆಸಿ ಈ ವರದಿಯನ್ನು ತಯಾರಿಸಿದೆ. ಅಧ್ಯಕ್ಷ ಮುಯಿಝು ಚೀನಾ ಪರ ಮತ್ತು ಭಾರತ ಕಟುಟೀಕಾರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮಾಲ್ಡೀವ್ಸ್​ನಲ್ಲಿದ್ದ ಭಾರತದ ಸೇನಾ ತುಕಡಿಯನ್ನು ವಾಪಸ್​ ಪಡೆಯಲು ಅವರು ಆದೇಶಿಸಿದ್ದರು. ಭಾರತದ ಸೇನಾ ತುಕಡಿ ಹೊಂದಿರುವುದು ದೇಶದ ಭದ್ರತೆಗೆ ಆತಂಕ ಎಂದು ಅವರು ಚುನಾವಣಾ ಪ್ರಚಾರದಲ್ಲಿ ಹೇಳುತ್ತಿದ್ದರು.

ಇದರ ಜೊತೆಗೆ ಮಾಲ್ಡೀವ್ಸ್​ನಲ್ಲಿನ ರಾಜಕೀಯ, ಚುನಾವಣಾ ಪ್ರಚಾರ, ನಿಧಿಸಂಗ್ರಹಣೆ ಮತ್ತು ಹಣಕಾಸಿನ ವೆಚ್ಚಗಳ ಪಾರದರ್ಶಕತೆಯ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆ ಇಲ್ಲ ಎಂಬುದನ್ನು ವರದಿ ಗಮನಿಸಿದೆ. ಮಾಧ್ಯಮಗಳು ರಾಜಕೀಯ ಪಕ್ಷಪಾತ ಮಾಡುತ್ತವೆ ಎಂದಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಕೊರತೆಯನ್ನು ಅದು ಗುರುತಿಸಿದೆ.

ಮಾಲ್ಡೀವ್ಸ್​-ಭಾರತ ಬಿಕ್ಕಟ್ಟಿಗೆ ಕಾರಣವೇನು?:ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಕೆಲವು ಆಕರ್ಷಕ ಫೋಟೋಗಳನ್ನು ಹಂಚಿಕೊಂಡು, ಪ್ರವಾಸಿಗರ ಪಟ್ಟಿಯಲ್ಲಿ ಈ ದ್ವೀಪವನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು. ಇದನ್ನು ಮಾಲ್ಡೀವ್ಸ್‌ನ ಮೂವರು ಸಚಿವರು ಟೀಕಿಸಿದ್ದರು. ಮೋದಿ ವಿರುದ್ಧ ವೈಯಕ್ತಿಕ ಟೀಕೆಯನ್ನೂ ಮಾಡಿದ್ದರು. ಇದು ಉಭಯ ರಾಷ್ಟ್ರಗಳ ಮಧ್ಯೆ ತೀವ್ರ ಬಿಕ್ಕಟ್ಟು ಸೃಷ್ಟಿಸಿದೆ.

ದೇಶವನ್ನು ವಿಡಂಬಿಸಿದ್ದ ಮಾಲ್ಡೀವ್ಸ್​ಗೆ ತಕ್ಕಪಾಠ ಕಲಿಸಬೇಕು ಎಂದು ಭಾರತೀಯರು ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ. ಇದಲ್ಲದೇ, ಸಚಿವರ ಟೀಕೆಗೆ ಸ್ವತಃ ಆ ದೇಶದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯರು ಮಾಲ್ಡೀವ್ಸ್​ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ:ಚೀನಾ ಬದಲು ಭಾರತದಿಂದ ಮಾಲ್ಡೀವ್ಸ್‌ ಹೆಚ್ಚು ಸುರಕ್ಷಿತ: ಮಾಜಿ ಉಪಾಧ್ಯಕ್ಷ ಅದೀಬ್​

ABOUT THE AUTHOR

...view details