ಸಿಡ್ನಿ(ಆಸ್ಟ್ರೇಲಿಯಾ):ಆಸ್ಟ್ರೇಲಿಯಾದಲ್ಲಿ ಮಳೆಯ ಅವಾಂತರಗಳು ಹೆಚ್ಚುತ್ತಿವೆ. ಸಿಡ್ನಿಯ ನ್ಯೂಸೌತ್ ವೇಲ್ಸ್‌ನಲ್ಲಂತೂ ತುರ್ತು ಅಪಾಯ ಪರಿಸ್ಥಿತಿ ಘೋಷಣೆಯಾಗಿದೆ. ಶುಕ್ರವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು ನದಿಗಳು ಮೈದುಂಬಿ ಹರಿಯುತ್ತಿವೆ.
ಬಿಟ್ಟೂಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಸಿಡ್ನಿಯ ಮುಖ್ಯ ಅಣೆಕಟ್ಟೆಯಲ್ಲಿ ನೀರು ಅಪಾಯ ಮಟ್ಟ ತಲುಪಿದೆ. ನ್ಯೂ ಸೌತ್ ವೇಲ್ಸ್ನ ಸಾವಿರಾರು ನಿವಾಸಿಗಳು ತಕ್ಷಣ ಬೇರೆಡೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ. ಅಲ್ಲಿನ ಸ್ಥಳೀಯಾಡಳಿತ ಸಮರೋಪಾದಿಯಲ್ಲಿ ಜನರ ಸ್ಥಳಾಂತರ ಪ್ರಕ್ರಿಯೆಯಲ್ಲಿ ತೊಡಗಿದೆ. ನ್ಯೂಕ್ಯಾಸಲ್ ಮತ್ತು ಬೆಟೆಮನ್ಸ್ ಕೊಲ್ಲಿಯ ನಡುವಿನ ಕರಾವಳಿಯಲ್ಲಿ ವಾಸಿಸುವ ಜನರಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ಸರ್ಕಾರ ಸೂಚಿಸಿದೆ.