ಕರ್ನಾಟಕ

karnataka

ETV Bharat / international

ಜರ್ಮನಿಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ.. ದೂರದ ನಾಡಲ್ಲಿ ಕನ್ನಡದ ಕಲರವ!

ಜರ್ಮನಿಯ ಬ್ರೌನ್ಸ್ವೆಗ್ ಹಾಗೂ ವೋಲ್ಫ್ಸಬರ್ಗ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗರು 68ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡತನವನ್ನು ಮೆರೆದರು.

Karnataka Rajyotsava  Celebrate in Germany
ಜರ್ಮನಿಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.

By ETV Bharat Karnataka Team

Published : Nov 11, 2023, 6:25 PM IST

Updated : Nov 11, 2023, 7:11 PM IST

ವೋಲ್ಫ್ಸಬರ್ಗ್(ಜರ್ಮನಿ): ಕನ್ನಡ ನಾಡಿನ ಪುಣ್ಯಭೂಮಿಯ ಮಣ್ಣಿನಿಂದ ಅದೆಷ್ಟೋ ದೂರ ಇರುವ ಜರ್ಮನಿಯ ಬ್ರೌನ್ಸ್​ವೆಗ್​ ಮತ್ತು ವೋಲ್ಫ್ಸ್​ಬರ್ಗ್​ ನಗರಗಳಲ್ಲಿರುವ ಕನ್ನಡಿಗರು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಬ್ರಾವೊ ಕನ್ನಡಿಗರ ಬಳಗದ ಆಶ್ರಯದಲ್ಲಿ ಸಂಭ್ರಮದಿಂದ ಆಚರಿಸಿದರು.

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪುಎತ್ತಣಿಂದೆತ್ತ ಸಂಬಂಧವಯ್ಯಾ ? ಎಂಬಂತೆ ವಿದೇಶದಲ್ಲಿ ಕನ್ನಡ ಭಾಷೆಯ ಕಂಪನ್ನು ಪಸರಿಸುತ್ತಿರುವ ಹೊರದೇಶದ ಕನ್ನಡಿಗರು ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಕಂಪು ಬೀರುವಿಕೆಗೆ ಸಾಕ್ಷಿಯಾಗಿತ್ತು.

ಕನ್ನಡ ಬಳಗವು ಕನ್ನಡ ರಾಜ್ಯೋತ್ಸವ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರ್ಮನಿಯ ಬ್ರೌನ್ಸ್ವೆಗ್ ಮತ್ತು ವೋಲ್ಫ್ಸಬರ್ಗ್ ನಗರದಲ್ಲಿ ಏರ್ಪಡಿಸಲಾಗಿತ್ತು. ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ನರೇಶ ಸೀತಾರಾಮ್ ಅವರ ಬಾಲ ವಿಕಾಸ ಸಂಸ್ಥೆಯ ಮಕ್ಕಳು ಚಾಲನೆ ನೀಡಿದರು.

ಈ ವೇಳೆ ಶಿಕ್ಷಣ ತಜ್ಞ ನರೇಶ ಸೀತಾರಾಮ್ ಮಾತನಾಡಿ, ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ವ್ಯವಹಾರಕ್ಕಾಗಿ ಆಂಗ್ಲ ಭಾಷೆ ಬೇಕು, ಆದರೆ ನಾವು ಯಾವಾಗಲೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.

30ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿ ಮನರಂಜಿಸಿದರು. ಮಕ್ಕಳ ಪ್ರಾರ್ಥನೆ, ನಾಡಗೀತೆ ಹಾಡುವುದರೊಂದಿಗೆ ಕನ್ನಡ ತಾಯಿ ಭುವನೇಶ್ವರಿಗೆ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ಭರತನಾಟ್ಯ, ಜಾನಪದ ನೃತ್ಯ, ಗೀತ ಗಾಯನ, ರಸಪ್ರಶ್ನೆ, ಮಕ್ಕಳ ವೇಷಭೂಷಣಗಳು ಕಾಯಕ್ರಮದಲ್ಲಿ ನೋಡುಗರನ್ನು ಆಕರ್ಷಿಸಿದವು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿಗಳಿಗೆ ಕನ್ನಡ ನಾಡಿನ ವಿವಿಧ ಭಾಗಗಳ ಆಹಾರ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ನಮ್ಮ ಕನ್ನಡ ಸಂಸ್ಕೃತಿ, ಭಾಷೆಯ ಮಹತ್ವವನ್ನು ಸಾರುವ ಇಂಥ ಅನೇಕ ಕಾರ್ಯಕ್ರಮಗಳನ್ನು ಆಚರಿಸಿ ನಮ್ಮ ನಾಡಿನ ಅಸ್ತಿತ್ವವನ್ನು ಜಗತ್ತಿಗೆ ಸಾರುವ ಪ್ರಯತ್ನ ಸದಾ ಹೀಗೆ ಮುಂದುವರೆಯುತ್ತದೆ ಎಂದು ಬ್ರಾ-ವೊ ಕನ್ನಡಿಗರು ಕನ್ನಡನಾಡಿನ ಅಭಿಮಾನವನ್ನು ವಿದೇಶದಲ್ಲೂ ಪ್ರಸ್ತುತಪಡಿಸಿದರು.

ಶಿವರಾಯ ಜಾಣ ಮತ್ತು ಆನಂದ್‌ ಪಾಟೀಲ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇನ್ನು ಕಾಯಕ್ರಮದಲ್ಲಿ ನರೇಶ್, ಲಕ್ಷ್ಮಿ ಮೂರ್ತಿ, ಶಿವರಾಯ, ಆನಂದ್, ಕಿರಣ್, ಶ್ರೀಧರ್, ಪೂಜಾ, ಅಪೂರ್ವ, ಶ್ರೇಯಸ್, ಐಶ್ವರ್ಯ, ದೀಪಾ, ಪವನ್, ಗುರುಚರಣ್, ಕುಸುಮಾ, ರಂಜಿತ್, ನಮಿತಾ, ಸಂದೀಪ್, ಪ್ರಭಾತ್, ಅಮೋಘ, ರಾಹುಲ್, ದರ್ಶನ, ವಿನಯ್, ಸವಿತಾ, ಸುರೇಖಾ ಸೇರಿದಂತೆ ಮತ್ತಿರರರು ಹಾಜರಿದ್ದರು.

ಇದನ್ನೂಓದಿ:ರಾಜ್ಯಾದ್ಯಂತ ಕಳೆಗಟ್ಟಿದ 68ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಗಮನ ಸೆಳೆದ ಮಕ್ಕಳ ಪಥಸಂಚಲನ

Last Updated : Nov 11, 2023, 7:11 PM IST

ABOUT THE AUTHOR

...view details