ಟುನಿಸ್: ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮುಳುಗಡೆಯಾಗಿರುವ ಘಟನೆ ಟುನೀಶಿಯಾದ ಆಗ್ನೇಯ ಕರಾವಳಿಯಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 34 ವಲಸಿಗರು ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಸಹಾರನ್ ದೇಶಗಳಿಂದ ಒಟ್ಟು 38 ವಲಸಿಗರನ್ನು ಹೊತ್ತು ಬರುತ್ತಿದ್ದ ದೋಣಿಯೊಂದು ಗುರುವಾರ ಮುಳುಗಡೆಯಾಗಿದೆ. ಮುಳುಗಡೆಯಾದ ದೋಣಿಯು ಟುನೀಶಿಯಾದ ಸ್ಫ್ಯಾಕ್ಸ್ ಪ್ರಾಂತ್ಯದಿಂದ ಯುರೋಪಿಯನ್ ಕರಾವಳಿಗೆ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ನಾಲ್ವರು ವಲಸಿಗರನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಟುನೇಶಿಯಾದಿಂದ ಇಟಲಿಗೆ ಹೊರಟಿದ್ದ ಸುಮಾರು 56 ದೋಣಿಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ದೇಶವನ್ನು ತೊರೆಯಲು ಯತ್ನಿಸಿದ್ದ ಸುಮಾರು 3,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಟ್ಯುನಿಷಿಯನ್ ನ್ಯಾಷನಲ್ ಗಾರ್ಡ್‌ನ ಹೌಸೆಮ್ ಜೆಬಾಬ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು ಐದು ವಲಸಿಗರ ದೋಣಿ ಮುಳುಗಡೆಯಾಗಿದ್ದು, ಇವುಗಳು ಇಟಲಿಯತ್ತ ಸಾಗುತ್ತಿದ್ದವು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಟುನೇಶಿಯಾವು ವಲಸಿಗರಿಗೆ ಯುರೋಪ್‌ಗೆ ತೆರಳಲು ಪ್ರಮುಖ ಸ್ಥಳವಾಗಿ ಮಾರ್ಪಾಡಾಗಿದೆ.