ದುಬೈ:ಅರಬ್ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈ ಎಕ್ಸ್‌ಪೋ- 2020 ಆರಂಭವಾಗಿದೆ. ಈ ಎಕ್ಸ್ಪೋದಲ್ಲಿನ ಕಟ್ಟಡಗಳ ನಿರ್ಮಾಣದ ವೇಳೆಯಲ್ಲಿ ಹಲವು ಅವಘಡಗಳು ಸಂಭವಿಸಿದ್ದು, ಈ ಕುರಿತು ಅಲ್ಲಿನ ಅಧಿಕಾರಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ದುಬೈ ಹೊರಭಾಗದಲ್ಲಿ ಈ ಎಕ್ಸ್‌ಪೋ ನಡೆಯುತ್ತಿದ್ದು, ಹಲವು ಕಾಮಗಾರಿಗಳ ನಿರ್ಮಾಣದ ವೇಳೆಯಲ್ಲಿ ಅವಘಡಗಳು ನಡೆದು ಒಟ್ಟು ಐವರು ಸಾವನ್ನಪ್ಪಿದ್ದಾರೆ ಎಂದಿದ್ದ ಅಲ್ಲಿನ ಅಧಿಕಾರಿಗಳು ನಂತರ ಮೂವರು ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಗೊಂದಲದ ಹೇಳಿಕೆ ನೀಡಿದ್ದರು. ನಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಇದೊಂದು ತಪ್ಪು ಮಾಹಿತಿ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ದುಬೈ ಎಕ್ಸ್‌ಪೋ ಸೈಟ್ ನಿರ್ಮಾಣಕ್ಕೆ ಸುಮಾರು 7 ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡುವವರ ಮೇಲೆ ಮತ್ತು ದುಬೈ ಖ್ಯಾತಿಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಬಾರದು ಎಂದ ಕಾರಣಕ್ಕೆ ಹಲವು ತಿಂಗಳವರೆಗೆ ಅವಘಡಗಳ ಅಂಕಿ ಅಂಶಗಳನ್ನು ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ.
ಸಾವು-ನೋವುಗಳ ಬಗ್ಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಿಖರವಲ್ಲದ ಅಂಕಿಅಂಶಗಳನ್ನು ನೀಡುತ್ತಿರುವುದು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆಫ್ರಿಕಾ, ಏಷ್ಯಾಗಳಿಂದ ಕಡಿಮೆ ಸಂಬಳಕ್ಕೆ ದುಬೈಗೆ ಬಂದು ಕೆಲಸ ಮಾಡುವ ಕಾರ್ಮಿಕರ ಕುರಿತು ಬೇಜವಾಬ್ದಾರಿ ಯುಎಇ ಸರ್ಕಾರಕ್ಕೆ ಬೇಜವಾಬ್ದಾರಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.
ಶನಿವಾರ ಬೆಳಗ್ಗೆ ಈ ಕುರಿತು ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಎಕ್ಸ್‌ಪೋ ವಕ್ತಾರ ಸ್ಕೋನೈಡ್ ಮೆಕ್‌ಗೀಚಿನ್ 'ಎಕ್ಸ್‌ಪೋ ಸ್ಥಳದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ' ಎಂದಿದ್ದರು. ಇದಾದ ನಂತರ ಸಂಜೆ ವೇಳೆ ಎಕ್ಸ್‌ಪೋ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದಾರೆ, 72 ಮಂದಿಗೆ ಗಾಯವಾಗಿದೆ ಎಂದು ಮೆಕ್‌ಗೀಚಿನ್ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿತ್ತು.