ಕರ್ನಾಟಕ

karnataka

ETV Bharat / international

ಉದ್ವಿಗ್ನತೆಯ ಶಮನಕ್ಕೆ ಪಂಚ ಸೂತ್ರಗಳಿಗೆ ಭಾರತ-ಚೀನಾ ಸಹಮತ, ಸೇನೆ ಹಿಂಪಡೆಯಲು ತ್ವರಿತ ಕಾರ್ಯತಂತ್ರ - ಎಸ್ ಜೈಶಂಕರ್

ಎಲ್​ಎಸಿಯಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿರುವಂತೆಯೇ ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್​, ಚೀನಾ ವಿದೇಶಾಂಗ ಸಚಿವ ವಾಂಗ್​ ಯಿ ಅವರನ್ನು ಮಾಸ್ಕೋದಲ್ಲಿ ಭೇಟಿ ಮಾಡಿದರು. ಪೂರ್ವ ಲಡಾಖ್​​ನಲ್ಲಿ ನಾಲ್ಕು ತಿಂಗಳಿಂದ ಉಲ್ಬಣಗೊಳ್ಳುತ್ತಿರುವ ಗಡಿ ವಿವಾದದ ಬಗ್ಗೆ ಇಬ್ಬರೂ ನಾಯಕರು ಉನ್ನತ ಮಟ್ಟದ ಮಾತುಕತೆ ನಡೆಸಿದರು.

ಎಸ್ ಜೈಶಂಕರ್
ಎಸ್ ಜೈಶಂಕರ್

By

Published : Sep 11, 2020, 5:41 AM IST

Updated : Sep 11, 2020, 6:52 AM IST

ಮಾಸ್ಕೋ [ರಷ್ಯಾ] :ಪೂರ್ವ ಲಡಾಖ್​​ನಲ್ಲಿ ಉಂಟಾಗಿರುವ ಗಡಿ ವಿವಾದವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಚೀನಾದ ವಿದೇಶಾಂಗ ಸಚಿವ ಸಚಿವ ವಾಂಗ್ ಯಿ ಅವರನ್ನು ಮಾಸ್ಕೋದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ಭಾರತ ಹಾಗೂ ಚೀನಾದ ನಡುವೆ ಉಂಟಾಗಿರುವ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಚಾರವಾಗಿ ಜೈಶಂಕರ್​ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು. ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಭಾರತವು ಎಂದಿಗೂ ಬದಲಿಸಲು ಪ್ರಯತ್ನಿಸಲಿಲ್ಲ ಎಂದು ಜೈಶಂಕರ್ ಹೇಳಿದರು. ಸುಮಾರು 2 ಗಂಟೆ ನಡೆದ ಮಹತ್ವದ ಸಭೆಯಲ್ಲಿ ಉದ್ವಿಗ್ನ ಸ್ಥಿತಿ ಶಮನ ಮತ್ತು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಜೈಶಂಕರ್​ ಹೆಚ್ಚು ಒತ್ತುಕೊಟ್ಟರು ಎನ್ನಲಾಗಿದೆ.

ಶಾಂಘೈ ಸಹಕಾರ ಸಂಘಟನೆಯ ಸಮಾವೇಶದ ಸಂದರ್ಭದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಭೇಟಿ ನಡೆಯಿತು.

ಇತ್ತೀಚಿಗೆ ಪೂರ್ವ ಲಡಾಖ್​​ನಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿರುವ ಜೈಶಂಕರ್, ಅಂದಿನ ಘರ್ಷಣೆಯ ಸಂದರ್ಭದಲ್ಲಿ ಚೀನಾ ಸೇನೆ ಕೈಗೊಂಡ ಕ್ರಮಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.1976ರಲ್ಲಿ ರಾಯಭಾರಿ ಮಟ್ಟದ ಸಂಬಂಧಗಳು ಪುನರಾರಂಭಗೊಂಡ ನಂತರ ಮತ್ತು 1981 ರಿಂದ ಗಡಿ ಮಾತುಕತೆ ನಡೆಸಿದಾಗಿನಿಂದ, ಭಾರತ-ಚೀನಾ ಸಂಬಂಧಗಳು ಬಹುಮಟ್ಟಿಗೆ ಸಕಾರಾತ್ಮಕ ಪಥದಲ್ಲಿ ಅಭಿವೃದ್ಧಿಗೊಂಡಿವೆ ಎಂದು ಒತ್ತಿ ಹೇಳಿದರು. ಆಗಾಗ ಕೆಲವೊಂದು ಘಟನೆಗಳು ನಡೆದಿದ್ದರೂ, ಗಡಿ ಪ್ರದೇಶಗಳಲ್ಲಿ ಶಾಂತಿಯೇ ಹೆಚ್ಚಾಗಿ ಮೇಲುಗೈ ಸಾಧಿಸಿದೆ ಎಂದು ಸಭೆಯಲ್ಲಿ ಜೈಶಂಕರ್​ ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಗಡಿ ಸಮಸ್ಯೆ ಪರಿಹಾರಕ್ಕೆ ಸಮಯ ಮತ್ತು ಶ್ರಮ ಬೇಕು. ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಎರಡೂ ರಾಷ್ಟ್ರಗಳ ಸಂಬಂಧಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಚೀನಾಗೆ ಜೈಶಂಕರ್​ ಮನವರಿಕೆ ಮಾಡಿಕೊಟ್ಟರು. ಗಡಿ ಪ್ರದೇಶಗಳ ನಿರ್ವಹಣೆಯ ಕುರಿತು ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಭಾರತೀಯ ಕಡೆಯವರು ಮಾಡಿಲ್ಲ. ಭಾರತೀಯ ಸೈನ್ಯವು ಎಲ್ಲವನ್ನು ಸೂಕ್ಷ್ಮವಾಗಿ ಅನುಸರಿಸಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು. ಗಡಿಯಿಂದ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳುವುದು ತಕ್ಷಣದ ಕಾರ್ಯವಾಗಿದೆ. ಭವಿಷ್ಯದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಇದು ಅವಶ್ಯಕ ಎಂದು ಜೈಶಂಕರ್ ಸಭೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.

ಎರಡು ಗಂಟೆಗಳ ಕಾಲ ನಡೆದ ಮಾತುಕತೆಯ ನಂತರ, ಎರಡೂ ರಾಷ್ಟ್ರಗಳು ಐದು ಅಂಶಗಳ ಒಪ್ಪಂದಕ್ಕೆ ಮುಂದಾದರು. ಭಾರತ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಉಭಯ ದೇಶಗಳು ಮಾರ್ಗದರ್ಶನ ಪಡೆದುಕೊಳ್ಳಬೇಕು. ಭಿನ್ನಾಭಿಪ್ರಾಯಗಳು ವಿವಾದಗಳಾಗಲು ಅವಕಾಶ ನೀಡದಿರುವುದು ಸೇರಿದಂತೆ ಗಡಿ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿ ಎರಡೂ ದೇಶಗಳ ಹಿತದೃಷ್ಟಿಯಿಂದ ಸಮಂಜಸವಲ್ಲ. ಆದ್ದರಿಂದ ಎರಡೂ ರಾಷ್ಟ್ರಗಳ ಸೇನಾ ಪಡೆಗಳು ತಮ್ಮ ಸಂವಹನವನ್ನು ಮುಂದುವರೆಸಬೇಕು. ತ್ವರಿತವಾಗಿ ಸೇನೆ ಹಿಂಪಡೆದುಕೊಳಬೇಕು. ಗಡಿಯಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಒಪ್ಪಂದಕ್ಕೆ ಬರಲಾಯಿತು.

ಚೀನಾ-ಭಾರತ ಗಡಿ ವ್ಯವಹಾರಗಳ ಬಗ್ಗೆ ಈಗಿರುವ ಎಲ್ಲಾ ಒಪ್ಪಂದಗಳು ಮತ್ತು ನಿಯಮಾವಳಿಗಳನ್ನು ಎರಡೂ ಕಡೆಯವರು ಪಾಲಿಸಬೇಕು. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಿಕೊಳ್ಳಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

Last Updated : Sep 11, 2020, 6:52 AM IST

For All Latest Updates

ABOUT THE AUTHOR

...view details