ಕೀವ್ :ತಮ್ಮ ಮೇಲೆ ಯುದ್ಧ ಮಾಡುತ್ತಿದ್ದರೂ ರಷ್ಯಾಗೆ ಸಡ್ಡು ಹೊಡೆದಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುರೋಪಿಯನ್ ಒಕ್ಕೂಟದಲ್ಲಿ ತಮ್ಮ ದೇಶಕ್ಕೆ ಸದಸ್ಯತ್ವ ನೀಡುವ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ಅಲ್ಲಿನ ಸಂಸತ್ ಹೇಳಿದೆ.
ಉಕ್ರೇನ್ ಸಂಸತ್ತಿನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿಗೆ ಸಹಿ ಹಾಕಿದ್ದಾರೆ. ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸೈಬಿಗಾ, ಝೆಲೆನ್ಸ್ಕಿ ಐತಿಹಾಸಿಕವಾಗಿ ಮಹತ್ವದ ದಾಖಲೆಗೆ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇಂದು ರಾಜಧಾನಿ ಕೀವ್‌ನಲ್ಲಿ ಅಜ್ಞಾತ ಸ್ಥಳವೊಂದರಿಂದಲೇ ಈ ಪ್ರಕ್ರಿಯೆಯನ್ನು ಝೆಲೆನ್ಸ್ಕಿ ಪೂರೈಸಿದ್ದಾರೆ. ಈ ವೇಳೆ ಅವರು ಹಾನಿಗೊಳಗಾದ ದೇಶಕ್ಕೆ ತಕ್ಷಣದ ಸದಸ್ಯತ್ವವನ್ನು ನೀಡುವಂತೆ ಯೂರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ.
ನಾನು ಉಕ್ರೇನ್‌ನ ಯುರೋಪಿಯನ್ ಯೂನಿಯನ್ ಸದಸ್ಯತ್ವ ಅರ್ಜಿಗೆ ಸಹಿ ಹಾಕಿದ್ದೇನೆ. ದಾಖಲೆಗಳು ಬ್ರಸೆಲ್ಸ್‌ಗೆ ಹೋಗುತ್ತಿವೆ. ನಾವು ಇದನ್ನು ಸಾಧಿಸಬಹುದೆಂಬ ಖಾತ್ರಿ ನನಗಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಇಯು ಕಾರ್ಯವಿಧಾನದ ಪ್ರಕಾರ, ಸದಸ್ಯತ್ವ ಅರ್ಜಿಯನ್ನು ಯುರೋಪಿಯನ್ ಯೂನಿಯನ್ ಕೌನ್ಸಿಲ್ ಅಧ್ಯಕ್ಷರಿಗೆ ಸಲ್ಲಿಸಬೇಕು. ಕೌನ್ಸಿಲ್ ಪ್ರಸ್ತುತ ಫ್ರಾನ್ಸ್ ನೇತೃತ್ವದಲ್ಲಿದೆ.
ಇದನ್ನೂ ಓದಿ:ರಷ್ಯಾ ದಾಳಿಗೆ 14 ಮಕ್ಕಳು ಸೇರಿ 352 ಮಂದಿ ಬಲಿ: ನಾಗರಿಕ ಪ್ರದೇಶಗಳ ಮೇಲೆ ಬಾಂಬ್ ದಾಳಿ