ಮಾಸ್ಕೋ(ರಷ್ಯಾ) : ಉಕ್ರೇನ್ನಲ್ಲಿನ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕಾಗಿ ರಷ್ಯಾ ಬೆಳಗ್ಗೆ 10 ಗಂಟೆಯಿಂದ ಐದು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳು ಅಧಿಕೃತ ಹೇಳಿಕೆ ನೀಡಿವೆ.
ಕೈವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ರಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗುತ್ತದೆ ಎಂದು ರಷ್ಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ರಚನೆ ಮಾಡಲಾಗಿದ್ದು, ಇನ್ನೂ ಹಲವು ಕಾರಿಡಾರ್‌ಗಳನ್ನು ರಚಿಸಬೇಕೆಂಬ ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಷ್ಯಾದ ಮತ್ತು ಉಕ್ರೇನಿಯನ್ ಕಡೆಯವರು ಬೆಳಗ್ಗೆ 9:30ರಿಂದ ಪರಸ್ಪರ ಸಂವಹನದಲ್ಲಿ ತೊಡಗಿಸಿಕೊಳ್ಳಲು ಮತ್ತು ಮಾಹಿತಿ ವಿನಿಮಯಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಮಾರ್ಚ್ 10ರಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ರಷ್ಯಾ - ಉಕ್ರೇನ್ ಯುದ್ಧದ ಎಫೆಕ್ಟ್: ಅಮೆರಿಕ ಷೇರು ಮಾರುಕಟ್ಟೆ ಕುಸಿತ
ಈ ಮೊದಲು ಹಲವು ಪ್ರದೇಶಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ರಚಿಸಲಾಗಿದ್ದು, ಕೆಲವೆಡೆ ಆ ಕಾರಿಡಾರ್ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿದ್ದವು. ಈಗ ಮತ್ತೊಮ್ಮೆ ಐದು ನಗರಗಳಲ್ಲಿ ಕದನ ವಿರಾಮ ಘೋಷಿಸಿ ಮಾನವೀಯ ಕಾರಿಡಾರ್‌ಗಳನ್ನು ರಚಿಸಲಾಗಿದೆ.