ಲಂಡನ್: ರೂಪಾಂತರಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರದಂದು ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್ ಅನ್ನು ಮತ್ತೆ ಜಾರಿಗೊಳಿಸಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಬೋರಿಸ್ ಜಾನ್ಸನ್, ಈ ಕೋವಿಡ್ ಮಹಾಮಾರಿ ಕಳೆದ ವರ್ಷ ಪ್ರಾರಂಭವಾಗಿದ್ದು, ಇದರ ವಿರುದ್ಧ ಇಡೀ ರಾಷ್ಟ್ರವೇ ಹೋರಾಡಿದೆ. ಮಹಾಮಾರಿ ಕೊರೊನಾ ವಿರುದ್ಧ ಸಾಮೂಹಿಕ ಹೋರಾಟ ನಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದೀಗ ಕೊರೊನಾ ರೂಪಾಂತರ ಹೊಂದಿದೆ. ಈ ರೂಪಾಂತರ ಕೊರೊನಾ ಹರಡುವಿಕೆ ವೇಗ ಗಮನಿಸಿದರೆ ಆತಂಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೋವಿಡ್ನಿಂದ ಆಸ್ಪತ್ರೆಗಳು ಒತ್ತಡಕ್ಕೊಳಗಾಗಿದೆ. ಇಂಗ್ಲೆಂಡ್ನ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಳೆದ ವಾರದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 27,000ಕ್ಕೆ ತಲುಪಿದೆ. ಇದು ಕಳೆದ ವರ್ಷ ಏಪ್ರಿಲ್ನಲ್ಲಿ ಆದ ಒಟ್ಟು ಸೋಂಕಿತರ ಸಂಖ್ಯೆಗಿಂತ ಶೇ. 40 ರಷ್ಟು ಹೆಚ್ಚಿದೆ ಎಂದು ತಿಳಿಸಿದರು. ಕಳೆದ ಒಂದು ವಾರದಲ್ಲಿ ದೇಶದಲ್ಲಿ ಮೃತರ ಸಂಖ್ಯೆ ಶೇ. 20 ರಷ್ಟು ಏರಿಕೆಯಾಗಿದ್ದು, ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದರು.