ಲಾ ಪಾಲ್ಮಾ(ಸ್ಪೇನ್):ಜ್ವಾಲಾಮುಖಿ ಸ್ಫೋಟದಿಂದಾಗಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಸ್ಪೇನ್ನ ಲಾ ಪಾಲ್ಮಾ ದ್ವೀಪದಲ್ಲಿ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. 24 ಗಂಟೆಗಳ ಅವಧಿಯಲ್ಲಿ 36 ಬಾರಿ ಭೂಕಂಪ ಸಂಭವಿಸಿದೆ.
ಶನಿವಾರ ಮುಂಜಾನೆ ಲಾ ಪಾಲ್ಮಾ ದ್ವೀಪದ ಮಾಜಾ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ಮೊದಲು ವರದಿಯಾಗಿತ್ತು. ಆ ಬಳಿಕ ಇಂದು ಮುಂಜಾನೆವರೆಗೆ ಒಟ್ಟು 36 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಮೊದಲು ಲಾವಾರಸ ಹೊರಚಿಮ್ಮಿದ್ದು, ಈವರೆಗೆ 7,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 28ನೇ ದಿನವೂ ಜ್ವಾಲಾಮುಖಿ ಮುಂದುವರೆದಿದ್ದು, 1,548 ಕಟ್ಟಡಗಳು ಸುಟ್ಟು ಭಸ್ಮವಾಗಿವೆ. 732 ಹೆಕ್ಟೇರ್ ಭೂಮಿಯನ್ನು ಜ್ವಾಲಾಮುಖಿ ಆವರಿಸಿದೆ. ಇದರ ಭೀಕರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: VIDEO.. ಲಾ ಪಾಲ್ಮಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ : ಚರ್ಚ್ಗೂ ನುಗ್ಗಿದ ಲಾವಾರಸ
50 ವರ್ಷಗಳ ಹಿಂದೆ, 1971ರಲ್ಲಿ ಲಾ ಪಾಲ್ಮಾ ದ್ವೀಪದಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟವಾಗಿತ್ತು. ಈ ಬಾರಿಯ ಜ್ವಾಲಾಮುಖಿ ಅದಕ್ಕಿಂತಲೂ ತೀವ್ರವಾಗಿದೆ ಎಂದು ಹೇಳಲಾಗಿದೆ.