ಕೀವ್:ಅವನು ರಷ್ಯಾದ ಯೋಧ. ಉಕ್ರೇನ್ ಮೇಲೆ ದಂಡೆತ್ತಿ ಬಂದು ಸೈನಿಕರ ಕೈಗೆ ಸಿಕ್ಕಿ ಯುದ್ಧ ಖೈದಿಯಾದ. ಊಟ, ನಿದ್ದೆ ಬಿಟ್ಟು ರಣಾಂಗಣದಲ್ಲಿ ಹೋರಾಡಿ ಹಸಿವಿನಿಂದ ಬಳಲಿದ್ದ ಯೋಧನಿಗೆ ಮಹಿಳೆ ಚಹಾ ಮತ್ತು ಬ್ರೆಡ್ ನೀಡಿ ಸಂತೈಸಿದಳು. ತಲೆ ನೇವರಿಸಿ 'ಚಿಂತಿಸಬೇಡ' ಎಂದು ತಾಯಿ ಮಮತೆ ತೋರಿದಳು.
ಬಳಿಕ ಆ ಖೈದಿಯ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿ ಅವನ ತಾಯಿ ಜೊತೆ ಮಾತನಾಡಿಸಿದರು. ಎಲ್ಲವೂ ಸರಿಯಿದೆ, ದೇವರು ನಿಮ್ಮೊಂದಿಗಿದ್ದಾನೆ. ನಿಮ್ಮ ಮಗ ಜೀವಂತವಾಗಿದ್ದಾನೆ, ಹೆದರಬೇಡಿ ಎಂದು ಆ ಮಹಿಳೆ ಹೇಳುತ್ತಿದ್ದಾಗ ತಾಯಿ ಮತ್ತು ಯೋಧನ ಕಣ್ಣಲ್ಲಿ ನೀರು ಜಿನುಗಿದವು.
ತನ್ನ ದೇಶದ ಮೇಲೆಯೇ ಯುದ್ಧಕ್ಕೆ ಬಂದು ಬಳಲಿದ ರಷ್ಯಾ ಯೋಧನ ಸಂತೈಸಿದ ಉಕ್ರೇನ್ ಮಹಾತಾಯಿ ಇದು ತನ್ನ ದೇಶದ ಮೇಲೆಯೇ ರಷ್ಯಾದ ಯೋಧ ಯುದ್ಧ ಸಾರಿ ಬಂದು ಸೆರೆಸಿಕ್ಕರೂ ಉಕ್ರೇನ್ ಮಹಿಳೆ ಆತನನ್ನು ಸಂತೈಸಿ ಅಕ್ಕರೆ ತೋರಿದ ಪರಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಯುದ್ಧಕಾಲದಲ್ಲಿ ಮಾನವ ಸಹಾನುಭೂತಿಗೆ ಹಿಡಿದ ಕನ್ನಡಿ ಎಂದು ಬಣ್ಣಿಸಲಾಗಿದೆ.
ನಿಮ್ಮ ಮಕ್ಕಳು ಉಕ್ರೇನ್ನಲ್ಲಿ ಯುದ್ಧ ಖೈದಿಗಳಾಗಿ ಬಂಧಿತರಾಗಿದ್ದಾರೆ. ಇದು ದುರದೃಷ್ಟಕರ ಎಂದು ರಷ್ಯಾದ ತಾಯಂದಿರನ್ನು ಉದ್ದೇಶಿಸಿ ಉಕ್ರೇನ್ ರಕ್ಷಣಾ ಸಚಿವಾಲಯ ಫೇಸ್ಬುಕ್, ಟ್ವಿಟ್ಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ನಿಮ್ಮ ಮಕ್ಕಳ ಹಿಂಪಡೆಯಿರಿ:ಇನ್ನು ಉಕ್ರೇನ್ನಲ್ಲಿ ಸೆರೆಸಿಕ್ಕು ಬಂಧಿತರಾದ ರಷ್ಯಾದ ಯುದ್ಧ ಸೈನಿಕರನ್ನು ತಮ್ಮ ತಾಯಂದಿರು ಕೀವ್ಗೆ ಬಂದು ತಮ್ಮ ಮಕ್ಕಳನ್ನು ಬಿಡಿಸಿಕೊಂಡು ಹೋಗಬಹುದು ಎಂದು ಉಕ್ರೇನ್ ಸರ್ಕಾರ ಆಫರ್ ಮಾಡಿದೆ. ಅಲ್ಲದೇ ಈ ಪ್ರಕ್ರಿಯೆಗಾಗಿ ಇ-ಮೇಲ್ ಮತ್ತು ಸಹಾಯವಾಣಿಗಳನ್ನು ಆರಂಭಿಸಿದೆ. ತಮ್ಮ ಮಗ ಸೆರೆಯಾದ ಬಗ್ಗೆ ಪುರಾವೆಗಳ ಸಮೇತ ಬಂದಲ್ಲಿ ಅಂಥವರನ್ನು ಬಿಟ್ಟು ಕೊಡಲಾಗುವುದು ಎಂದು ಉಕ್ರೇನ್ ತಿಳಿಸಿದೆ.
ನಾವು ಉಕ್ರೇನಿಯನ್ನರು, ವ್ಲಾಡಿಮಿರ್ ಪುಟಿನ್ರ ಪ್ಯಾಸಿಸ್ಟ್ಗಳಂತೆ ವರ್ತಿಸುವುದಿಲ್ಲ. ಮತ್ತು ಅಮಾಯಕ ಮಕ್ಕಳು ಮತ್ತು ತಾಯಿಂದಿರ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ ಎಂದು ಅಲ್ಲಿನ ಸರ್ಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಓದಿ:ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದು ಉಕ್ರೇನ್ ಅಧ್ಯಕ್ಷ!