ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಇಂದಿಗೆ 9 ದಿನಗಳಾಗುತ್ತಿವೆ. ಜಗತ್ತಿನ ಬಲಿಷ್ಠ ಸೇನೆಯ ಕ್ರಮ ಖಂಡಿಸಿ ಹಲವು ಜಾಗತಿಕ ದೈತ್ಯ ಕಂಪನಿಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಮುಂದುವರಿಸಿವೆ. ಇದೀಗ ಇಂತಹ ನಡೆಗಳಿಗೆ ವ್ಲಾಡಿಮಿರ್ ಪುಟಿನ್ ಬಲವಾದ ತಿರುಗೇಟು ನೀಡಿದ್ದಾರೆ.
ಟ್ಟಿಟ್ಟರ್, ಫೇಸ್‌ಬುಕ್, ಬಿಬಿಸಿ, ಆ್ಯಪ್ ಸ್ಟೋರ್‌ಗಳು ಹಾಗೂ ಕೆಲ ನ್ಯೂಸ್ ಸೈಟ್‌ಗಳನ್ನು ರಷ್ಯಾ ಸರ್ಕಾರ ನಿರ್ಬಂಧಿಸಿದೆ. ತಮ್ಮ ಸೇನೆ ನಡೆಸುತ್ತಿರುವ ಯುದ್ಧದ ಬಗ್ಗೆ ಉಕ್ರೇನ್ ಸೇರಿದಂತೆ ಇತರೆ ಕೆಲ ದೇಶಗಳಿಂದ ಬರುತ್ತಿರುವ ನಕಾರಾತ್ಮಕ ಮಾಹಿತಿಯನ್ನು ನಿರ್ಬಂಧಿಸಲು ರಷ್ಯಾ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಸೇನೆ ಮೇಲೆ ಸುಳ್ಳು ಸುದ್ದಿ ಹಬ್ಬಿಸಿದರೆ ಜೈಲು:ರಷ್ಯಾ ಸೇನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಅಂಥವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ರಷ್ಯಾ ನೀಡಿದೆ. ಈ ಸಂಬಂಧ ಇಂದು ರಷ್ಯಾದ ಸಂಸತ್ತಿನ ಕೆಳಮನೆಯಲ್ಲಿ ತನ್ನ ಸಶಸ್ತ್ರ ಪಡೆಗಳ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಕಾನೂನನ್ನು ಅಂಗೀಕರಿಸಿದೆ. ಸಶಸ್ತ್ರ ಪಡೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡುವವರಿಗೆ ಈ ಕಾನೂನಿನ ಅಡಿ ದಂಡ ಮತ್ತು 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಜಪೋರಿಜಿಯಾ ಪರಮಾಣು ಸ್ಥಾವರ ರಷ್ಯಾ ವಶ:ರಷ್ಯಾದ ಪಡೆಗಳಿಂದ ಜಪೋರಿಜಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ರಕ್ಷಿಸುವ ಪ್ರಯತ್ನದಲ್ಲಿ ಹಲವಾರು ಉಕ್ರೇನ್ ಸೈನಿಕರು ಕೊಲ್ಲಲ್ಪಟ್ಟರು ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ಘಟನೆಯಲ್ಲಿ ಕೆಲ ಸೈನಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ. ರಷ್ಯಾದ ಪಡೆಗಳು ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದಾರೆ. ಯುರೋಪಿನ ಅತಿ ದೊಡ್ಡ ಜಪೋರಿಜಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ವಶಪಡಿಸಿಕೊಂಡಿದೆ ಎಂಬುದನ್ನು ರಷ್ಯಾ ಕೂಡ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ರಷ್ಯಾದಿಂದ ಅಂತರ ಕಾಪಾಡಿಕೊಳ್ಳಿ: ಭಾರತಕ್ಕೆ ಅಮೆರಿಕ ಮನವಿ