ಯೆರೆವಾನ್:ಅರ್ಮೇನಿಯಾ ಸಂಘರ್ಷದ ಉದ್ವಿಗ್ನತೆಯಿಂದ ಇದೀಗ ಸಹಜ ಸ್ಥಿತಿಗೆ ಬಂದಿದೆ. ಆದ್ದರಿಂದ ಜನರ ಮೇಲೆ ಹೇರಲಾಗಿರುವ ಮಿಲಿಟರಿ ಆಡಳಿತ ತೆರೆವು ಮಾಡಿ ಸಹಜ ಆಡಳಿತ ಜಾರಿಗೆ ತರುವಂತೆ ಅರ್ಮೇನಿಯಾದ ರಾಜಧಾನಿ ಯೆರೆವಾನ್‌ನಲ್ಲಿರುವ ಸಂಸತ್ ಕಟ್ಟಡದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ.
ನಾಗೋರ್ನೊ-ಕರಾಬಖ್ ಹಗೆತನದ ಹಿನ್ನೆಲೆಯಲ್ಲಿ ಜಾರಿಗೆ ತರಲಾದ ಶಸ್ತ್ರಾಸ್ತ್ರ ಕಾನೂನನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಗುರುವಾರ ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
ಪ್ರತಿಭಟನೆ ಇಲ್ಲಿಯವರೆಗೆ ಶಾಂತಿಯುತವಾಗಿದೆ. ಆದರೆ, ಅಜರ್ ಬೈಜಾನ್ ಮತ್ತು ಅರ್ಮೇನಿಯಾ ನಡುವಿನ ವಿವಾದಿತ ನಾಗೋರ್ನೊ-ಕರಾಬಖ್ ಪ್ರಾಂತ್ಯ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದರಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದು ಹೀಗೆ ಇರಲಿದೆ ಎಂದು ಹೇಳಲಾಗುವುದಿಲ್ಲ.
ಸಂಸತ್ ಅಧಿವೇಶನವನ್ನು ಕರೆಯಲು ನಿರ್ಧರಿಸಲಾಗಿದ್ದು ಅರ್ಮೇನಿಯನ್ ಪ್ರತಿಪಕ್ಷದ ಶಾಸಕರು ಸೆಪ್ಟೆಂಬರ್ 27ರಂದು ನಾಗೋರ್ನೊ-ಕರಾಬಖ್‌ನಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ವಿಧಿಸಲಾಗಿರುವ ಸೈನ್ಯಾಡಳಿತವನ್ನು ತೆಗೆದು ಹಾಕುವ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ. ಇದರ ನಡುವೆ ಸಂಸತ್ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ನ.10ರಂದು ನಾಗೋರ್ನೊ-ಕರಾಬಖ್ ಪ್ರದೇಶದಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ಅರ್ಮೇನಿಯಾ ಹಾಗೂ ಅಜೆರ್ಬೈಜಾನ್ ಸೇನೆ ಹೋರಾಟವನ್ನು ನಿಲ್ಲಿಸಿವೆ. ರಷ್ಯಾದ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದಂತೆ ಉಭಯ ದೇಶಗಳೂ ಕದನ ವಿರಾಮಕ್ಕೆ ಸಹಿ ಮಾಡಿದ್ದು, ತಾತ್ಕಾಲಿಕವಾಗಿ ವಿವಾದವನ್ನು ಅಂತ್ಯಗೊಳಿಸಲಾಗಿದೆ.