ಕೋವಿಡ್-19 ಸೋಂಕನ್ನು ತಡೆಯಲು ಜಾರಿಗೊಳಿಸಲಾಗಿರುವ ಲಾಕ್‍ಡೌನ್ ದೇಶಾದ್ಯಂತ ಮಕ್ಕಳ ಮಾನಸಿಕ ಆರೋಗ್ಯ, ದೈಹಿಕ ಬೆಳವಣಿಗೆ ಹಾಗೂ ಕಲಿಕೆಯ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೇಶದೆಲ್ಲೆಡೆ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ನಿಜವೆನಿಸುತ್ತದೆ. ಆದರೆ, ಅದರ ವ್ಯಾಪ್ತಿ ಮತ್ತು ತೀವ್ರತೆ ನೋಡಿದಾಗ ಆಘಾತವೆನಿಸದಿರದು.
ದೇಶದಲ್ಲಿರುವ 18 ವರ್ಷದೊಳಗಿನ 444 ಮಿಲಿಯನ್ ಮಕ್ಕಳ ಪೈಕಿ ನಿರ್ಗತಿಕ ಬಡ ಕುಟುಂಬಗಳ ಸುಮಾರು 40 ಮಿಲಿಯನ್ ಮಕ್ಕಳ ಮೇಲೆ ಈ ಲಾಕ್‍ಡೌನ್ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಹೇಳಿದೆ. ಈ ಮಕ್ಕಳ ಆರೋಗ್ಯ ಬಿಕ್ಕಟ್ಟು ಮಕ್ಕಳ ಹಕ್ಕುಗಳ ಬಿಕ್ಕಟ್ಟಾಗಿ ಪರಿವರ್ತನೆಯಾಗಲಿದೆ ಎಂಬ ಎಚ್ಚರಿಕೆ ಸಹ ಕೊಟ್ಟಿದೆ.
ನಗರಗಳ ರಸ್ತೆಗಳ ಮೇಲೆ, ಫ್ಲೈಓವರುಗಳ ಅಡಿಯಲ್ಲಿ ಇಲ್ಲವೇ ಕಿರಿದಾದ ಓಣಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಬದುಕುತ್ತಿರುವ ಕೋಟ್ಯಂತರ ಮಕ್ಕಳ ಸ್ಥಿತಿಯಂತೂ ತೀರಾ ಅಸಹನೀಯವಾಗಿದೆ. ದೆಹಲಿಯೊಂದರಲ್ಲೇ ಇಂತಹ ಮಕ್ಕಳ ಸಂಖ್ಯೆ 70,000 ದಿಂದ ಕೆಲವು ಲಕ್ಷಗಳವರೆಗೂ ಇದೆಯೆಂದು ಅಂದಾಜಿಸಲಾಗಿದೆ.
ಈಟಿವಿ ಭಾರತ್‍ನೊಂದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಯುನಿಸೆಫ್ನ ಭಾರತದ ಪ್ರತಿನಿಧಿಯಾಗಿರುವ ಡಾ.ಯಾಸ್ಮೀನ್ ಆಲಿ ಹೇಕ್ ಮಾತನಾಡುತ್ತಾ, “ಕೋವಿಡ್-19 ಸಾಂಕ್ರಾಮಿಕ ರೋಗವು ಭಾರತದ ಕೋಟ್ಯಂತರ ಮಕ್ಕಳ ಮೇಲೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಅತ್ಯಂತ ದುಸ್ಥಿತಿ ಅನುಭವಿಸುತ್ತಿರುವವರೆಂದರೆ ಸ್ಲಂಗಳಲ್ಲಿ ವಾಸಿಸುವ ಬಡ ಮಕ್ಕಳು, ಬೀದಿಯ ಮೇಲೆ ವಾಸಿಸುವ ಮಕ್ಕಳು, ಗ್ರಾಮೀಣ ಪ್ರದೇಶಗಳ ಬಡ ಮಕ್ಕಳು ಹಾಗೂ ಪೋಷಕರು ವಲಸೆ ಹೋಗಿದ್ದು ತಮ್ಮ ಮನೆಗಳಿಗೆ ಮರಳಲಾಗದೇ ಸಿಲುಕಿಕೊಂಡವರ ನತದೃಷ್ಟ ಮಕ್ಕಳು” ಎಂದರು.
ಇಂತಹ ಮಕ್ಕಳು ನಾನಾ ಬಗೆಯ ಸಂಕಟ, ಶೋಷಣೆಗಳಿಗೆ ಒಳಗಾಗುತ್ತಿದ್ದಾರೆ. ಹಸಿವಿನಿಂದ ಸುಸ್ತಾಗಿ ಎಲ್ಲೋ ಮಲಗಲು ಹೋದಾಗ ಮನೆಗಳಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ ಹಿಡಿದು ಲೈಂಗಿಕ ಕಿರುಕುಳ ಇಲ್ಲವೇ ಶೋಷಣೆಗೆ ಒಳಗಾಗುತ್ತಿರುವ ಸಂದರ್ಭಗಳೂ ಇವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಸಹಾಯಕ್ಕಾಗಿ ಮತ್ತು ಬದುಕುಳಿಯಲು ತಿನ್ನಲು ಆಹಾರವಿಲ್ಲದೇ ಸರ್ಕಾರ ನಡೆಸುವ ಸಹಾಯವಾಣಿಗಳಿಗೆ ಕರೆ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಗೋಳಿಡುತ್ತಿದ್ದಾರೆ.
ಈ ರೀತಿಯಲ್ಲಿ ಸರ್ಕಾರದ ಉಸ್ತುವಾರಿಯಲ್ಲಿರುವ ಮಕ್ಕಳ ಸಹಾಯವಾಣಿಗೆ ಬಂದಿರುವ ಕರೆಗಳ ಸಂಖ್ಯೆ 3 ಲಕ್ಷವನ್ನು ದಾಟಿರುವ ಆಘಾತ ಎನಿಸಿವು ಸಂಗತಿಯನ್ನು ತಿಳಿಸಿದ ಹೇಕ್, “ಶಾಲೆಗಳು ನಡೆಯದೇ ದೈನಂದಿನ ಚಟುವಟಿಕೆಗಳೆಲ್ಲ ನಿಂತು ಹೋಗಿರುವ ಸಂದರ್ಭದಲ್ಲಿ ಈ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಒತ್ತಡಗಳೂ ಸಹ ಕಳವಳಕಾರಿ ಅಂಶಗಳು. ಇಂತಹ ಸಂದರ್ಭದಲ್ಲಿ ಸಹಾಯವಾಣಿಗಳಿಗೆ ಬೆಂಬಲ ಒದಗಿಸುವ ಕೆಲಸವನ್ನು ಯುನಿಸೆಫ್ ಮಾಡುತ್ತಿದೆ. ಸಹಾಯವಾಣಿಗಳಿಗೆ ಮನೋವೈಜ್ಞಾನಿಕ ಆರೈಕೆಯ (ಪಿಎಸ್ಎಸ್) ಹಾಗೂ ಮಕ್ಕಳ ಮೇಲಿನ ಹಿಂಸೆಯನ್ನು ಎದುರಿಸುವ ಕುರಿತು ತರಬೇತಿ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ” ಎಂದರು.
ಯುನಿಸೆಫ್ನ ಪ್ರಯತ್ನಗಳೇನು?
“ಈ ವಿಷಯದಲ್ಲಿ ಕಾಳಜಿ ಹೊಂದಿರುವ ಹಲವಾರು ಸಂಘ ಸಂಸ್ಥೆ ಮತ್ತು ವ್ಯಕ್ತಿಗಳ ಸಂಪರ್ಕಗಳನ್ನು ಯುನಿಸೆಫ್ ಸಂಘಟಿಸುತ್ತಿದೆ. ಇದರಲ್ಲಿ ಪ್ರೌಢ ವಯಸ್ಕ ಗುಂಪುಗಳು, ತರುಣರ ಗುಂಪುಗಳು, ಸಮುದಾಯ ಆಧಾರಿತ ಸಂಘಟನಾ ಜಾಲಗಳು, ಮುಂಚೂಣಿ ಕಾರ್ಯಕರ್ತರು, ಜನಪ್ರತಿನಿಧಿಗಳ ಜಾಲಗಳು, ಮಕ್ಕಳ ಕಲ್ಯಾಣ ರಕ್ಷಣಾ ಅಧಿಕಾರಿಗಳನ್ನು ಒಳಗೊಂಡಂತೆ ಪೊಲೀಸರು, ಮುಂತಾದ ಹತ್ತು ಹಲವು ಸಮೂಹಗಳ ಸಹಾಯದೊಂದಿಗೆ ಸಾಧ್ಯವಾದಷ್ಟೂ ಹೆಚ್ಚಿನ ಕುಟುಂಬಗಳನ್ನು, ಪೋಷಕರನ್ನು, ಮಕ್ಕಳು ಮತ್ತು ಯುವಕರನ್ನು ತಲುಪು ಪ್ರಯತ್ನ ನಡೆಸುತ್ತಿದ್ದೇವೆ. ಈ ಎಲ್ಲರಿಗೂ ಸಮಸ್ಯೆಯ ಕುರಿತು ತಿಳುವಳಿಕೆ ಮತ್ತು ಸಂದೇಶ ತಲುಪಿಸುತ್ತೇವೆ” ಎನ್ನುತ್ತಾರೆ ಈ ಯುನಿಸೆಫ್ ಪ್ರತಿನಿಧಿ.
ಸರಿಸುಮಾರು 16,000 ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಕೋವಿಡ್-19ರ ಕುರಿತು ಆನ್‍ಲೈನ್ ಮೂಲಕ ಸೂಕ್ತ ದೃಷ್ಟಿಕೋನ ನೀಡುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯುನಿಸೆಫ್ ಸಹಕಾರದಿಂದ ನಡೆಸಿದೆ. ಯುನಿಸೆಫ್ ಸಂಸ್ಥೆಯು ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಮಕ್ಕಳಿಗೆ ಕಠಿಣ ಸಂದರ್ಭದಲ್ಲಿ ವಿಶೇಷ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮಕ್ಕಳು ಮಾತ್ರವಲ್ಲದೇ ವಲಸೆ ಕಾರ್ಮಿಕರು ಮನೆಯೊಳಗೆ ಪ್ರತ್ಯೇಕಿತರು, ಕ್ವಾರಂಟೈನ್ ಆಗಿರುವವರು ಮತ್ತು ಆಸ್ಪತ್ರೆಗಳಲ್ಲಿ ದಾಖಲಾಗಿ ಪ್ರತ್ಯೇಕತೆಯಲ್ಲಿ ಇರುವವರಿಗೂ ಈ ಸಹಾಯ ನೀಡಲಾಗುವುದು” ಎಂದು ಅವರು ತಿಳಿಸಿದರು.