ಜಿನೀವಾ: ಜಗತ್ತಿನಲ್ಲಿ ಸದ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಳೆದ ವಾರ ವಿಶ್ವದಲ್ಲಿ 34 ಲಕ್ಷ ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಅಂಕಿ - ಅಂಶ ಹಿಂದಿನ ವಾರಕ್ಕಿಂದ ಶೇಕಡಾ 12 ರಷ್ಟು ಹೆಚ್ಚಾಗಿದೆ. ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ, 57 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಹೆಚ್ಒ ತಿಳಿಸಿದೆ.
ಪ್ರಪಂಚದಲ್ಲಿ ಮುಂದಿನ ಮೂರು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 200 ಮಿಲಿಯನ್ ದಾಟಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಪಶ್ಚಿಮ ಪೆಸಿಫಿಕ್ ಮತ್ತು ಯೂರೋಪಿಯನ್ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿರೀಕ್ಷೆಗೂ ಮೀರಿ ವ್ಯಾಪಿಸಿದೆ. ಕಳೆದ ವಾರ ಇಂಡೋನೇಷ್ಯಾ, ಬ್ರಿಟನ್, ಬ್ರೆಜಿಲ್, ಭಾರತ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಿವೆ.