ಬುಡಾಪೆಸ್ಟ್: ಅಮೆರಿಕ ಸೇರಿದಂತೆ ಇತರ ಕೆಲ ರಾಷ್ಟ್ರಗಳು ಈಗ ಕೊರೊನಾ ಓಡಿಸಲು ಬೂಸ್ಟರ್ ಡೋಸ್ ಮೊರೆ ಹೋಗಿವೆ. ಆದರೆ ಹಂಗೇರಿ ಮಾತ್ರ ಅಮೆರಿಕ, ಭಾರತ, ಇಂಗ್ಲೆಂಡ್, ಫ್ರಾನ್ಸ್, ಇಟಲಿಗಳಿಗಿಂತ ಭಾರಿ ಮುಂಜಾಗ್ರತೆ ಕ್ರಮ ಕೈಗೊಂಡಿದೆ.
ಎಲ್ಲರೂ ಮೂರನೇ ಡೋಸ್ನಲ್ಲಿದ್ದರೆ ಹಂಗೇರಿ ಮಾತ್ರ ನಾಲ್ಕನೇ ಡೋಸ್ ನೀಡಲು ಸರ್ವ ಸನ್ನದ್ಧವಾಗಿದೆ. ಕೆಲವು ದಿನಗಳ ಹಿಂದೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಡೋಸ್ ನೀಡಲು ಇಲ್ಲಿನ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಪರಿಣಾಮವಾಗಿ 102 ವರ್ಷದ ವ್ಯಕ್ತಿ ಸೇರಿದಂತೆ ಸುಮಾರು 30 ಜನರು ಹಂಗೇರಿಯಲ್ಲಿ ನಾಲ್ಕನೇ ಡೋಸ್ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧವಾಗಿ ಲಸಿಕಾ ಪ್ರಮಾಣಪತ್ರವನ್ನೂ ಕೂಡಾ ಪಡೆದಿದ್ದಾರೆ ಎಂದು ಪೆಕ್ಸ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಸೆಂಟರ್ ಹೇಳಿದೆ.
ಹಂಗೇರಿ ಸರ್ಕಾರ ಜನವರಿ 13ರಂದೇ ನಾಲ್ಕನೇ ಡೋಸ್ ನೀಡುವ ಘೋಷಣೆ ಮಾಡಿತ್ತು. ವಿಶೇಷ ಎಂದರೆ ಕೆಲವರು ಇದಕ್ಕಿಂತ ಮುಂಚಿತವಾಗಿ ಫೋನ್ ಕರೆಗಳನ್ನು ಮಾಡಿ ನಮಗೆ ಲಸಿಕೆ ನೀಡಿ ಎಂಬ ಬೇಡಿಕೆ ಇಟ್ಟಿದ್ದರು ಎಂದು ಆಂಡೋರ್ ಸೆಬೆಸ್ಟೈನ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯಾರಿಗೆ ಈ ನಾಲ್ಕನೇ ಡೋಸ್?
ಒಂದು ಅಥವಾ ಹೆಚ್ಚು ದೀರ್ಘಕಾಲೀನ ಕಾಯಿಲೆಗಳಿಂದ (ಹೃದಯರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಮಧುಮೇಹ ಅಥವಾ ಕ್ಯಾನ್ಸರ್) ಬಳಲುತ್ತಿರುವ ವಯಸ್ಸಾದವರು ನಾಲ್ಕನೇ ಡೋಸ್ ಪಡೆಯಬಹುದಾಗಿದೆ. ಇಂತಹವರೇ ಈಗ ನಾಲ್ಕನೇ ಡೋಸ್ ಪಡೆದು ಕೊರೊನಾದಿಂದ ಮುಕ್ತಿ ಪಡೆಯುತ್ತಿದ್ದಾರಂತೆ
ಹಠಾತ್ ಕೊರೊನಾ ಸ್ಪೈಕ್... ಹೀಗಾಗಿ ನಾಲ್ಕನೇ ಡೋಸ್ ಮೊರೆ ಹೋದ ಹಂಗೇರಿ
ಹಠಾತ್ ಆಗಿ ಕೊರೊನಾ ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ಹಂಗೇರಿ ಸರ್ಕಾರ 60 ವರ್ಷದ ಮೇಲ್ಪಟ್ಟವರಿಗೆ ನಾಲ್ಕನೇ ಡೋಸ್ ನೀಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಮೂಲಕ ರೂಪಾಂತರಿ ಒಮಿಕ್ರಾನ್ ಕಾಟಕ್ಕೆ ಬ್ರೇಕ್ ಹಾಕಲು ಇಲ್ಲಿನ ವೈದ್ಯರು ಮುಂದಾಗಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಹಂಗೇರಿಯಲ್ಲಿ 21,219 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 1,348,233ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ.
ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 270 ರಿಂದ 40,507 ಕ್ಕೆ ಏರಿಕೆ ಕಂಡಿದೆ. ಪ್ರಸ್ತುತ, 2,630 ಕೋವಿಡ್ -19 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 228 ಜನ ವೆಂಟಿಲೇಟರ್ನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್‌ಗಳು ಸೇರಿದಂತೆ, 1,169,775 ಜನರು ಚೇತರಿಸಿಕೊಂಡಿದ್ದಾರೆ.