ರೋಮ್ (ಇಟಲಿ):ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನಕ್ಕೆ ಆಶಾಕಿರಣವೊಂದು ಗೋಚರಿಸಿದೆ. ಜಿ-20 (ಗ್ರೂಪ್- 20) ರಾಷ್ಟ್ರಗಳ ನಾಯಕರು ಆತಿಥೇಯ ಇಟಲಿಯ ರೋಮ್ ಮೂಲಕ ವರ್ಚುವಲ್ ಸಭೆ ನಡೆಸಿದ್ದು, ಮಾನವೀಯತೆಯ ನೆಲೆಯ ಮೇಲೆ ತಾಲಿಬಾನ್ ಸರ್ಕಾರಕ್ಕೆ ನೆರವು ನೀಡಲು ನಿರ್ಧರಿಸಿದ್ದಾರೆ.
1. ಯುರೋಪಿಯನ್ ಯೂನಿಯನ್‌ನಿಂದ $1.2 ಬಿಲಿಯನ್ ಘೋಷಣೆ
20 ರಾಷ್ಟ್ರಗಳ ಮುಖ್ಯಸ್ಥರು/ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಅಫ್ಘಾನಿಸ್ತಾನದ ಪುನಶ್ಚೇತನಕ್ಕೆ ಯೂರೋಪಿಯನ್ ಯೂನಿಯನ್ ಸುಮಾರು 1.2 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿದೆ. ಇದೇ ವೇಳೆ, ತಾಲಿಬಾನ್ ಜೊತೆಗೆ ಸಂಪರ್ಕ ಉಳಿಸಿಕೊಳ್ಳುವ ಅಗತ್ಯತೆಯನ್ನು ಇಟಲಿ ಒತ್ತಿಹೇಳಿದೆ.
2. ಅಫ್ಘಾನಿಸ್ತಾನ ವಿಚಾರವಾಗಿ ಜಿ-20 ಸಭೆಗೆ ಒತ್ತಾಯಿಸುತ್ತಿತ್ತು ಇಟಲಿ
ಅತ್ಯಂತ ಕುತೂಹಲಕಾರಿ ವಿಚಾರವೆಂದರೆ, ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಅವರು, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಕೇವಲ 5 ದಿನಗಳಲ್ಲಿ ಜಿ-20 ನಾಯಕರ ಸಭೆ ಕರೆಯಬೇಕೆಂದು ಒತ್ತಾಯಿಸುತ್ತಿದ್ದರು. ವಾದಿಸುವ ಅಥವಾ ಪ್ರತಿಕ್ರಿಯೆ ನೀಡುವ ಬದಲಿಗೆ ಜಿ-20 ರಾಷ್ಟ್ರಗಳು ಗುರುತರ ಜವಾಬ್ದಾರಿ ಹೊಂದಿವೆ. ಈ ತುರ್ತು ಪರಿಸ್ಥಿತಿಯಲ್ಲಿ ಅಫ್ಘನ್ ಜನರಿಗೆ ನಾವು ನೆರವಾಗಬೇಕಿದೆ ಎಂದು ಡ್ರಾಗಿ ಹೇಳಿದ್ದಾರೆ.
3. ಚೀನಾ, ರಷ್ಯಾದಿಂದ ಅಧ್ಯಕ್ಷರ ಬದಲಿಗೆ ಪ್ರತಿನಿಧಿಗಳು ಭಾಗಿ
ಅಫ್ಘಾನಿಸ್ತಾನದ ಮಿತ್ರರಾಷ್ಟವೆಂದೇ ಕರೆಸಿಕೊಳ್ಳಲಾಗುವ ಚೀನಾ, ರಷ್ಯಾದ ಅಧ್ಯಕ್ಷರ ಬದಲಾಗಿ ಅವರ ಪ್ರತಿನಿಧಿಗಳು ಸಭೆಯಲ್ಲಿ ಹಾಜರಾಗಿದ್ದರು.
4. ನೋವು ಅನುಭವಿಸುವುದನ್ನು ನೋಡುತ್ತಾ ಕೂರುವುದು ಸರಿಯಲ್ಲ- ಜರ್ಮನಿ
ಅಲ್ಲಿನ 4 ಕೋಟಿ ಜನರು ಅವ್ಯವಸ್ಥೆಯಲ್ಲಿರುವುದನ್ನು ಮತ್ತು ಅವರ ಅಧಃಪತನ ಹೊಂದುತ್ತಿರುವುದನ್ನು ನೋಡುತ್ತಾ ಕೂರುವುದು ಅಂತಾರಾಷ್ಟ್ರೀಯ ಸಮುದಾಯದ ಗುರಿಯಾಗಬಾರದು ಎಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅಭಿಪ್ರಾಯಪಟ್ಟರು.