ಪ್ಯಾರಿಸ್:ಫ್ರಾನ್ಸ್‌ನಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್ ಅವರು ದೇಶದಲ್ಲಿ ಮೂರು ವಾರಗಳ ಕಾಲ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಹಾಗೂ ಒಂದು ತಿಂಗಳ ಕಾಲ ದೇಶೀಯ ಸಂಚಾರಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮೂರನೇ ಬಾರಿ ಲಾಕ್ಡೌನ್ ಜಾರಿ ಮಾಡಿದಂತಾಗಿದೆ.
ಸಾಂಕ್ರಾಮಿಕದ ವೇಗ ಹೆಚ್ಚುತ್ತಿದ್ದು, ಮೂರು ವಾರಗಳ ಕಾಲ ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮುಚ್ಚಲಿದ್ದೇವೆ. ಈಗಾಗಲೇ ಪ್ಯಾರಿಸ್ ಹಾಗೂ ಉತ್ತರ ಮತ್ತು ಪೂರ್ವ ಫ್ರಾನ್ಸ್‌ನ ಇತರ ಭಾಗಗಳಲ್ಲಿ ಇರುವಂತಹ ಪ್ರಾದೇಶಿಕ ಸಂಚಾರ ನಿರ್ಬಂಧಗಳು ಇನ್ನು ಮುಂದೆ ಕನಿಷ್ಠ ಒಂದು ತಿಂಗಳು ಇಡೀ ದೇಶಕ್ಕೆ ಅನ್ವಯವಾಗಲಿದೆ. ನಾವು ಒಗ್ಗಾಟ್ಟಾಗಿ ಸಹಕರಿಸಿದರೆ ಮಾತ್ರ ಮತ್ತೆ ಸುರಂಗದಿಂದ ಹೊರಗೆ ಬಂದು ಬೆಳಕು ನೋಡಬಹುದಾಗಿದೆ ಎಂದು ಇಮ್ಮಾನ್ಯುವೆಲ್ ಮ್ಯಾಕ್ರೋನ್ ಹೇಳಿದ್ದಾರೆ.
ಅನಗತ್ಯವಾಗಿ ಅಂಗಡಿ- ಮುಂಗಟ್ಟು ತೆರೆಯುವಂತಿಲ್ಲ. ಜನರು ತಮ್ಮ ಮನೆಯ 10 ಕಿ.ಮೀ ವ್ಯಾಪ್ತಿಯೊಳಗೆ ಮಾತ್ರ ಅವಶ್ಯಕ ಕಾರ್ಯಗಳಿಗೆ ಸಂಚರಿಸಬಹುದು. ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದರು.