ನವದೆಹಲಿ :ಉಕ್ರೇನ್‌ನ ಮೇಲೆ ರಷ್ಯಾದ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿ ಸಿಲುಕಿರುವ ತನ್ನ ಪ್ರಜೆಗಳಿಗೆ ಎಲ್ಲಾ ಸಮಯದಲ್ಲೂ ಎಚ್ಚರಿಕೆ ವಹಿಸುವಂತೆ ಭಾರತ ಸರ್ಕಾರ ಶನಿವಾರ ಸಲಹೆ ನೀಡಿದೆ.
ಉಕ್ರೇನ್‌ನ ಹಲವಾರು ನಗರಗಳ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗಳು ಮತ್ತು ಉಕ್ರೇನ್ ರಾಜಧಾನಿ ಕೀವ್ ಮೇಲಿನ ಆಕ್ರಮಣದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆ ನೀಡಲಾಗಿದೆ.
ವಿದ್ಯಾರ್ಥಿಗಳು ಮತ್ತು ಇತರರು ಅಧಿಕಾರಿಗಳೊಂದಿಗೆ ಯಾವುದೇ ಮಾತುಕತೆ ನಡೆಸದೇ, ಉಕ್ರೇನ್ನಿಂದ ನಿರ್ಗಮಿಸಲು ಯಾವುದೇ ಗಡಿಗಳಿಗೆ ತೆರಳದಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸೂಚನೆ ನೀಡಲಾಗಿದೆ.
ಉಕ್ರೇನ್‌ನ ಪೂರ್ವ ಭಾಗದಲ್ಲಿ ಇರುವವರು ತಾವು ಇರುವ ಸ್ಥಳಗಳಲ್ಲೇ ಉಳಿಯಿರಿ ಅಥವಾ ಸಾಧ್ಯವಾದಷ್ಟು ಸುರಕ್ಷಿತವಾದ ಒಳಾಂಗಣಗಳಲ್ಲಿ ಉಳಿದುಕೊಳ್ಳಿ ಎಂದು ರಾಯಭಾರ ಕಚೇರಿ ಭಾರತೀಯರಿಗೆ ಸಲಹೆ ನೀಡಿದೆ.