ಲಂಡನ್ :ಅಫ್ಘಾನಿಸ್ತಾನದಿಂದ ಬ್ರಿಟನ್ ಜನರನ್ನು ಸ್ಥಳಾಂತರಿಸುವ ವಿಮಾನಗಳ ಹಾರಾಟದ ಅಂತ್ಯದ ಬಗ್ಗೆ ನಿಖರವಾದ ಟೈಮ್ಲೈನ್ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್ನ ವಿದೇಶಾಂಗ ಸಚಿವರು ಹೇಳಿದ್ದಾರೆ.
ಆದರೆ, ಆಗಸ್ಟ್ 31ರೊಳಗೆ ಈ ಮಿಷನ್ ಮುಕ್ತಾಯವಾಗಲಿದೆ. ಅಷ್ಟರೊಳಗೆ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಸ್ಪಷ್ಟವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ತಿಳಿಸಿದ್ದಾರೆ.
ಸ್ಥಳಾಂತರ ಕಾರ್ಯಾಚರಣೆಯನ್ನು ವಿಸ್ತರಿಸುವಂತೆ ಬ್ರಿಟನ್ ಮತ್ತು ಇತರ ಮಿತ್ರರಾಷ್ಟ್ರಗಳು ಅಮೆರಿಕದ ಮೇಲೆ ಒತ್ತಡ ಹೇರಿದ್ದವು. ಆದರೆ, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸುಮಾರು 6,000 ಯೋಧರಿದ್ದಾರೆ. ಈ ಸೇನೆಯ ಜತೆಗೆ ಇತರೆ ರಾಷ್ಟ್ರಗಳ ಯೋಧರು, ತಾಲಿಬಾನ್ನಿಂದ ತಪ್ಪಿಸಿಕೊಳ್ಳಲು ಜನರಿಗೆ ಸಹಾಯ ಮಾಡುತ್ತಿವೆ.
ಬ್ರಿಟಿಷ್ ಮಿಲಿಟರಿ ತನ್ನ ಸೇನೆ ಹಾಗೂ ಉಪಕರಣಗಳನ್ನು ಹಿಂತೆದುಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ, ಉಳಿದಿರುವ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತೇವೆ ಎಂದು ರಾಬ್ ಹೇಳಿದ್ದಾರೆ.
ಇದನ್ನೂ ಓದಿ : ಅಫ್ಘನ್ ಪ್ರಜೆಗಳು ಇ-ವೀಸಾದಡಿಯಲ್ಲಿ ಭಾರತಕ್ಕೆ ಪ್ರಯಾಣಿಸಬೇಕು : ಕೇಂದ್ರ ಗೃಹ ಇಲಾಖೆ
ಆಗಸ್ಟ್ 15ರಂದು ತಾಲಿಬಾನ್, ಅಫ್ಘನ್ ಅನ್ನು ವಶಪಡಿಸಿಕೊಂಡ ಬಳಿಕ ಬ್ರಿಟನ್ ಪಡೆಗಳು ಕಾಬೂಲ್ನಿಂದ ಅಂದಾಜು 9 ಸಾವಿರ ಜನರನ್ನು ಸ್ಥಳಾಂತರಿಸಿದೆ.