ಕಾಬೂಲ್(ಅಫ್ಘಾನಿಸ್ತಾನ): ಕ್ರೀಡೆಯಿಂದ ದೇಹ ಪ್ರದರ್ಶನವಾಗಲಿದೆ ಎಂಬ ಕಾರಣ ನೀಡಿ ಈಗಾಗಲೇ ಮಹಿಳಾ ಕ್ರಿಕೆಟ್ ಬ್ಯಾನ್ ಮಾಡಿ ಕಟ್ಟಪ್ಪಣೆ ಹೊರಡಿಸಿರುವ ಬೆನ್ನಲ್ಲೇ ತಾಲಿಬಾನ್ ಮತ್ತೊಂದು ನಿರ್ಧಾರ ಕೈಗೊಂಡಿದೆ.
ಮಹಿಳೆಯರು ಸಚಿವರಾಗಲು ಸಾಧ್ಯವಿಲ್ಲ. ಅವರು ಮಕ್ಕಳನ್ನು ಹೆರುತ್ತಿರಬೇಕು ಅನ್ನೋದು ತಾಲಿಬಾನ್ ನಿಲುವು. ಅಫ್ಘಾನಿಸ್ತಾನದಲ್ಲಿ ನೂತನವಾಗಿ ಸರ್ಕಾರ ರಚಿಸಿರುವ ತಾಲಿಬಾನ್ ಸಚಿವ ಸಂಪುಟದಲ್ಲಿ ತಮಗೂ ಸ್ಥಾನಮಾನ ನೀಡುವಂತೆ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ವಕ್ತಾರನೊಬ್ಬ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಸುದ್ದಿವಾಹಿನಿ ಜೊತೆ ಮಾತನಾಡಿರುವ ತಾಲಿಬಾನ್ ವಕ್ತಾರ ಸೈಯ್ಯದ್ ಜೆಕ್ರುಲ್ಲಾ ಹಶಿಮಿ, ಹೊಸದಾಗಿ ರಚನೆಯಾಗಿರುವ ಸಚಿವ ಸಂಪುಟದಲ್ಲಿ ಮಹಿಳೆಯರು ಇರುವ ಅಗತ್ಯವಿಲ್ಲ. ಅವರಿಗೆ ನೀಡುವ ಜವಾಬ್ದಾರಿ ನಿಭಾಯಿಸಲು ಅವರಿಂದ ಸಾಧ್ಯವಾಗದು. ಹೀಗಾಗಿ ಮಹಿಳೆಯರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದು ಅಸಾಧ್ಯ ಎಂದು ತಿಳಿಸಿದ್ದಾನೆ.