ತೈವಾನ್ (ಚೀನಾ): ಕೋವಿಡ್ ಡೆಲ್ಟಾ ರೂಪಾಂತರವು ಚೀನದಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಅಧಿಕಾರಿಗಳು ಜನರನ್ನು ಅವರವರ ಮನೆಯೊಳಗೆ ಕೂಡಿ ಹಾಕುತ್ತಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಜನರು ಹೊರಗಡೆ ಕಾಲಿಡದಂತೆ ಅವರನ್ನು ಮನೆಯೊಳಗೆ ಬಂಧಿಸುತ್ತಿರುವುದನ್ನು ನೋಡಿದರೆ 2019ರ ಕೊರೊನಾ ಸಾಂಕ್ರಾಮಿಕದ ಆರಂಭದಲ್ಲಿ ವುಹಾನ್ ಪ್ರಾಂತ್ಯದ ಸನ್ನಿವೇಶಗಳು ಮರುಕಳಿಸಿದಂತಿದೆ ಎಂದು ತೈವಾನ್ ನ್ಯೂಸ್‌ನಲ್ಲಿ ಕಿಯೋನಿ ಎವರಿಂಗ್ಟನ್ ಎಂಬ ಬರಹಗಾರರು ಬರೆದಿದ್ದಾರೆ.
ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಚೀನಾದ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ, ಮನೆಗಳ ಬಾಗಿಲುಗಳ ಮೇಲೆ ಕಬ್ಬಿಣದ ಸರಳುಗಳನ್ನು ಅಳವಡಿಸುತ್ತಿರುವುದು, ಮನೆಯ ಹೊರಗಿನ ಗೇಟ್ಗೆ ಬೀಗ ಜಡಿಯುತ್ತಿರುವುದನ್ನು ಕಾಣಬಹುದು.
'ಥಿಂಗ್ಸ್ ಚೀನಾ ಡೋಂಟ್ ವಾಂಟ್ ಯು ಟು ನೋ' ಎಂಬ ಟ್ವಿಟರ್ ಖಾತೆಯಿಂದಲೂ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, "ಅಪಾರ್ಟ್್ಮೆಂಟ್ನಲ್ಲಿ ಯಾರಿಗಾದರೂ ಸೋಂಕು ತಗುಲಿರುವುದು ದೃಢಪಟ್ಟರೆ ಇಡೀ ಕಟ್ಟಡವನ್ನು ಎರಡು ಮೂರು ವಾರಗಳವರೆಗೆ, ಕೆಲವೊಮ್ಮೆ ಅದಕ್ಕೂ ಹೆಚ್ಚು ಸಮಯ ಮುಚ್ಚಲಾಗುತ್ತದೆ " ಎಂದು ಬರೆಯಲಾಗಿದೆ.
ಚೀನಾದಲ್ಲಿ ಸದ್ಯದ ಕೋವಿಡ್ ಸ್ಥಿತಿ
2019ರ ಡಿಸೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಮೊದಲು ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಬಳಿಕ ಜಗತ್ತನ್ನೇ ವ್ಯಾಪಿಸಿದೆ. ಅಲ್ಲದೇ ಸಮಯ ವಿರಾಮ ಪಡೆಯುತ್ತಾ ತನ್ನ ರೂಪಗಳನ್ನು ಬದಲಿಸಿ ಮತ್ತಷ್ಟು ಬಲಶಾಲಿಯಾಗುತ್ತಿದೆ. ಇತರ ರಾಷ್ಟ್ರಗಳಲ್ಲಿ ಕೋವಿಡ್ ಅಬ್ಬರಿಸುತ್ತಿದ್ದ ವೇಳೆ ಕಟ್ಟುನಿಟ್ಟಿನ ಲಾಕ್ಡೌನ್ನಿಂದಾಗಿ ಬೆರಳೆಣಿಕೆಯಷ್ಟು ಮಾತ್ರ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಚೀನಾ ಹೇಳಿಕೊಳ್ಳುತ್ತಿತ್ತು. ಇದೀಗ ಚೀನಾದಲ್ಲಿ ಡೆಲ್ಟಾ ರೂಪಾಂತರ ಲಗ್ಗೆಯಿಟ್ಟಿದ್ದು, 17 ಪ್ರಾಂತ್ಯಗಳಿಗೆ ಹರಡಿದೆ. 2021ರ ಜನವರಿ ಬಳಿಕ ಆಗಸ್ಟ್ 9 ರಂದು ಅತಿಹೆಚ್ಚು ಅಂದರೆ 143 ಹೊಸ ಕೇಸ್ಗಳು ವರದಿಯಾಗಿರುವುದಾಗಿ ತೈವಾನ್ ನ್ಯೂಸ್ ವರದಿ ಮಾಡಿದೆ.