ಕಾಬೂಲ್(ಅಫ್ಘಾನಿಸ್ತಾನ): ಆಗಸ್ಟ್ 31ರೊಳಗೆ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವುದಾಗಿ ಹೇಳಿದ್ದ ಅಮೆರಿಕ ನಿಗದಿತ ಗಡುವಿಗೂ ಒಂದು ದಿನ ಮೊದಲೇ ಅಫ್ಘಾನಿಸ್ತಾನವನ್ನು ತೊರೆಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಇಲಾಖೆ, ಅಮೆರಿಕದ ಕೊನೆಯ ಯೋಧ ಅಫ್ಘಾನಿಸ್ತಾನವನ್ನು ತೊರೆದಿದ್ದಾರೆ. ಮೇಜರ್ ಜನರಲ್ ಕ್ರೀಸ್ ಡೊನಾಹು ಆಗಸ್ಟ್ 30 ರಂದು ಸಿ-17 ಸೇನಾ ವಿಮಾನದಲ್ಲಿ ಯುಎಸ್‌ಗೆ ವಾಪಸ್ ಆಗಿದ್ದಾರೆ. ಕಾಬೂಲ್‌ನಲ್ಲಿ ಯುಎಸ್ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಹೇಳಿದೆ.
ಸೋಮವಾರ(ನಿನ್ನೆ) ಅಂತಿಮವಾಗಿ ಅಮೆರಿಕದ ಪ್ರಜೆಗಳು ಹಾಗೂ ಯುಎಸ್ ಪಡೆಗಳಿಗೆ ನೆರವು ನೀಡಿದ್ದ ಅಫ್ಘಾನಿಸ್ತಾನದ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯ ಪೂರ್ಣಗೊಂಡಿತು. ಕಳೆದ ರಾತ್ರಿ ಇಲ್ಲಿಂದ ಕೊನೆಯ ವಿಮಾನ ಅಮೆರಿಕದತ್ತ ಪ್ರಯಾಣ ಬೆಳೆಸಿತು. ಇಲ್ಲಿಯವರೆಗೆ ಒಟ್ಟು 1,20,000 ಜನರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಅಮೆರಿಕ ತಿಳಿಸಿದೆ. ಅಮೆರಿಕ, ಬ್ರಿಟನ್, ಕೆನಡಾ ಸೇರಿದಂತೆ ಇತರೆ ಎಲ್ಲಾ ದೇಶಗಳು ನಡೆಸಿದ ರಕ್ಷಣಾ ಕಾರ್ಯಾಚರಣೆ ಬೆನ್ನಲ್ಲೇ ಭಾರತದ ಕೊನೆಯ ವಿಮಾನವೂ ನಿನ್ನೆ ದೆಹಲಿಗೆ ಬಂದಿಳಿಯಿತು.
ತೀವ್ರ ಸಂಘರ್ಷದಿಂದ ಕೂಡಿದ ದೇಶವನ್ನು ಮರುನಿರ್ಮಾಣ ಮಾಡಲು ಅಮೆರಿಕ, ಭಾರತ ಸೇರಿದಂತೆ ವಿವಿಧ ದೇಶಗಳು ಶತಕೋಟಿ ಡಾಲರ್ ಖರ್ಚು ಮಾಡಿದ್ದರೂ ಇದೀಗ ಇಡೀ ದೇಶ ಉಗ್ರಸಂಘಟನೆ ತಾಲಿಬಾನ್ ಕಬಂಧಬಾಹುಗಳಲ್ಲಿ ನರಳುತ್ತಿದೆ.
'ಅಫ್ಘಾನ್ ಜನರಿಗೆ ಬೆಂಬಲ ಮುಂದುವರಿಯುವುದು'
ಅಮೆರಿಕವು ಅಫ್ಘಾನ್ ಜನರಿಗೆ ಮಾನವೀಯ ನೆಲೆಗಟ್ಟಿನಲ್ಲಿ ನೆರವು ನೀಡುವುದನ್ನು ಮುಂದುವರಿಸುತ್ತದೆ. ಈ ಬೆಂಬಲ ಸರ್ಕಾರದ ಮೂಲಕ ಆಗಿರುವುದಿಲ್ಲ. ಬದಲಾಗಿ, ವಿಶ್ವಸಂಸ್ಥೆ ಮತ್ತು ಸರ್ಕಾರೇತರ ಸ್ವತಂತ್ರ ಸಂಸ್ಥೆಗಳ ಮೂಲಕ ಸಹಾಯ ಮುಂದುವರೆಯಲಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಪ್ರಯತ್ನಗಳಿಗೆ ತಾಲಿಬಾನ್ ಅಥವಾ ಯಾರಿಂದಲೂ ಅಡ್ಡಿಯಾಗುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕನ್ ಹೇಳಿದ್ದಾರೆ.