ಒಸಾಕ(ಜಪಾನ್): ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಜಿ-20 ಶೃಂಗಸಭೆ ಜಪಾನಿನ ಒಸಾಕದಲ್ಲಿ ಆರಂಭವಾಗಿದ್ದು, ಭಯೋತ್ಪಾದನೆ ನಿಗ್ರಹ ಹಾಗೂ ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವ್ಯವಹಾರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಯೋತ್ಪಾದನೆ ಮಟ್ಟ ಹಾಕುವ ಬಗ್ಗೆ ಗಟ್ಟಿ ದನಿ ಎತ್ತಿದ್ದು, ಜಿ-20 ಸದಸ್ಯ ರಾಷ್ಟ್ರಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿವೆ. ಭಯೋತ್ಪಾದಕ ಕೃತ್ಯಗಳಿಂದ ಅಮಾಯಕರ ಸಾವು ಮಾತ್ರವಲ್ಲದೇ ಒಂದು ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ಸ್ಥಿರತೆಯ ಮೇಲೂ ಹೊಡೆತ ಬೀಳುತ್ತದೆ ಎಂದು ಮೋದಿ ಹೇಳಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಯೋತ್ಪಾದನೆ ಹಾಗೂ ಆನ್ಲೈನ್ ಉಗ್ರತ್ವದ ಬಗ್ಗೆ ಹೋರಾಡುವ ಶಪಥ ಮಾಡಿದ್ದಾರೆ.