ಕಾಬೂಲ್: ಆಫ್ಘನ್ ವಾಯುಪ್ರದೇಶದಲ್ಲಿ ಯುಎಸ್ ಡ್ರೋನ್‌ಗಳು ಕಾರ್ಯನಿರ್ವಹಿಸುತ್ತಿವೆ.ಈ ಹಿನ್ನೆಲೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ತಡೆಗಟ್ಟಲು ಕಟ್ಟುಪಾಡುಗಳನ್ನು ಅನುಸರಿಸುವಂತೆ ತಾಲಿಬಾನ್ ಅಮೆರಿಕಕ್ಕೆ ಖಡಕ್ ಸೂಚನೆ ನೀಡಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಡ್ರೋನ್ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲು ಯಾರ ಅಪ್ಪಣೆ ಪಡೆಯಬೇಕಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ತಾಲಿಬಾನ್ ಈ ಹೇಳಿಕೆ ಹೊರ ಬಿದ್ದಿದೆ.
ಅಮೆರಿಕದ ಕ್ರಮವು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯಾಗಿದೆ ಎಂದು ತಾಲಿಬಾನ್‌ನ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ. ಅಮೆರಿಕ ಸೇರಿದಂತೆ ಎಲ್ಲ ದೇಶಗಳು ಪರಸ್ಪರ ಬಾಧ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದ್ದಾರೆ.
"ಬಾಧ್ಯತೆಗಳ ಮೇಲೆ ವರ್ತಿಸುವುದು ಋಣಾತ್ಮಕ ಪರಿಣಾಮಗಳನ್ನು ತಡೆಯುತ್ತದೆ. ನಾವು ಎಲ್ಲ ದೇಶಗಳಿಗೆ, ವಿಶೇಷವಾಗಿ ಅಮೆರಿಕಕ್ಕೆ ಪರಸ್ಪರ ಒಪ್ಪಂದಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡುತ್ತೇವೆ. ಯಾವುದೇ ಋಣಾತ್ಮಕ ಪರಿಣಾಮಗಳನ್ನು ತಡೆಗಟ್ಟಲು ಇದು ಸಹಕಾರಿಯಾಗುತ್ತದೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ತಾಲಿಬಾನ್ ಕಳೆದ ತಿಂಗಳು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತ್ತು. ಸೆಪ್ಟೆಂಬರ್‌ನಲ್ಲಿ ತನ್ನ ಮಧ್ಯಂತರ ಸರ್ಕಾರವನ್ನು ಸಹ ಘೋಷಿಸಿತು. ಕಳೆದ ವರ್ಷ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದ ದೋಹಾ ಒಪ್ಪಂದದ ಅಡಿ ಅಮೆರಿಕ ಪಡೆಗಳು ಆಗಸ್ಟ್ 31 ರಂದು ಅಫ್ಘಾನಿಸ್ತಾನವನ್ನು ತೊರೆದಿವೆ.