ಲಾಹೋರ್:ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಲ್ಲಿಯವರೆಗೆ 1,100ಕ್ಕೂ ಹೆಚ್ಚು ತಬ್ಲಿಘಿ ಜಮಾತ್ ಸದಸ್ಯರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದ್ದು, ಫೈಸಲಾಬಾದ್ ಮುಖ್ಯಸ್ಥ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾನೆ.
ಫೈಸಲಾಬಾದ್ ಭಾಗದ ತಬ್ಲಿಘಿ ಜಮಾತ್‌ನ ಮುಖ್ಯಸ್ಥ ಮೌಲಾನಾ ಸುಹೈಬ್ ರೂಮಿ (69) ಗುರುವಾರ ಸೋಂಕಿನಿಂದ ನಿಧನರಾಗಿದ್ದಾರೆ. ಇವರು ಕಳೆದ ತಿಂಗಳು ಲಾಹೋರ್‌ನಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬದ ಐವರು ಸದಸ್ಯರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಫೈಸಲಾಬಾದ್ ಉಪ ಆಯುಕ್ತ ಮುಹಮ್ಮದ್ ಅಲಿ ತಿಳಿಸಿದ್ದಾರೆ.
ಕುಟುಂಬದ ಎಲ್ಲ ಸದಸ್ಯರನ್ನು ಕ್ವಾರಂಟೈನಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ ಆರೋಗ್ಯ ಇಲಾಖೆಯ ಪ್ರಕಾರ, ಈ ಪ್ರಾಂತ್ಯದಲ್ಲಿ 1,100 ಕ್ಕೂ ಹೆಚ್ಚು ತಬ್ಲಿಘಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಮಾರ್ಚ್ ಆರಂಭದಲ್ಲಿ ಲಾಹೋರ್‌ನ ಪ್ರಧಾನ ಕಚೇರಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಗುರ್ತಿಸಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಮೂಲಗಳ ಪ್ರಕಾರ ಸಭೆ ನಡೆಸದಂತೆ ಸಲಹೆ ನೀಡಿದ್ದರೂ ಕೂಡ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ 7,260 ಮಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, 137 ಜನರು ಸಾವಿಗೀಡಾಗಿದ್ದಾರೆ. ಪಾಕ್ನ ಪಂಜಾಬ್ ಪ್ರಾಂತ್ಯದಲ್ಲೆ 3,300 ಸೋಂಕಿತರಿದ್ದಾರೆ.