ಕಾಬೂಲ್(ಅಫ್ಘಾನಿಸ್ತಾನ):ಆತ್ಮಹತ್ಯಾಕಾರ್ ಬಾಂಬ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಪಶ್ಚಿಮ ಪ್ರವೇಶದ್ವಾರದಲ್ಲಿ ನಡೆದಿದೆ.
ಪ್ರವೇಶ ದ್ವಾರದ ಚೆಕ್ಪಾಯಿಂಟ್ನ ಬಳಿ ಇದ್ದ ಸರ್ಕಾರಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಭಯೋತ್ಪಾದಕರು ಕಾರು ಬಾಂಬ್ ದಾಳಿ ನಡೆಸಿದ್ದಾರೆ ಎಂದು ಗೃಹ ಇಲಾಖೆಯ ವಕ್ತಾರ ತಾರೀಖ್ ಅರಿಯನ್ ಮಾಹಿತಿ ನೀಡಿದ್ದಾರೆ.
ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯೂ ಹೊಣೆ ಹೊತ್ತಿಲ್ಲ. ಆದರೆ, ಇದು ತಾಲಿಬಾನ್ ಕೈವಾಡ ಎಂದು ಉನ್ನತ ರಕ್ಷಣಾ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಆಫ್ಘನ್ನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ತಾಲಿಬಾನ್ ಸಂಘಟನೆಯೊಂದಿಗೆ ಆಫ್ಘನ್ ಸರ್ಕಾರ ಕತಾರ್ನಲ್ಲಿ ಮಾತುಕತೆ ನಡೆಸಿತ್ತು. ಆದರೂ ಕೂಡಾ ದಾಳಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದಾಳಿಗಳ ಪ್ರಮಾಣವೂ ಹೆಚ್ಚಾಗಿದೆ.
ಇದೇ ತಿಂಗಳ ಆರಂಭದಲ್ಲಿ ಬಂದೂಕುಧಾರಿಗಳು ಕಾಬೂಲ್ ವಿಶ್ವವಿದ್ಯಾಲಯದಲ್ಲಿ ದಾಳಿ ನಡೆಸಿ,. ಸುಮಾರು 22 ಮಂದಿಯನ್ನು ಕೊಂದಿದ್ದರು. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಬಹುತೇಕ ಎಲ್ಲರೂ ವಿದ್ಯಾರ್ಥಿಗಳಾಗಿದ್ದರು.