ಲಾಹೋರ್, ಪಾಕಿಸ್ತಾನ : ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ್ಮೇಲೆ ಸಾಮರಸ್ಯ, ಸಹೋದರತೆ ಕೂಡ ಇಬ್ಭಾಗವಾಗಿತ್ತು. ಒಂದೇ ಕುಟುಂಬದ ಒಡಹುಟ್ಟಿದವರೂ ಇಬ್ಭಾಗವಾಗಿದ್ದರು. ಆ ರೀತಿ ಬೇರೆ ಬೇರೆಯಾದ ಸುಮಾರು 200ಕ್ಕೂ ಹೆಚ್ಚು ಸ್ನೇಹಿತರು ಮತ್ತು ಕುಟುಂಬಸ್ಥರನ್ನು ಮತ್ತೆ ಒಂದುಗೂಡಿಸುವ ಮಹತ್ಕಾರ್ಯವನ್ನ ಪಂಜಾಬಿಯ ಲೆಹರ್ ಎಂಬ ಯೂಟ್ಯೂಬ್ ಚಾನೆಲ್‌ವೊಂದು ಮಾಡಿದೆ.
ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನದ ಕರ್ತಾರ್‌ಪುರದಲ್ಲಿ ಮತ್ತೆ ಒಂದಾಗಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಇಂಥದ್ದೇ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳನ್ನು, ಸ್ನೇಹಿತರನ್ನು ಒಗ್ಗೂಡಿಸಿರುವುದಾಗಿ ಪಂಜಾಬಿ ಲೆಹರ್ ಹೇಳಿಕೊಂಡಿದೆ.
ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಮೂಲಕ ಭಾರತದ ಪಂಜಾಬ್‌ನ ಫುಲ್ಲನ್‌ವಾಲ್ ಪ್ರದೇಶದಿಂದ ಹಬೀಬ್ ಎಂಬುವರು ಬಂದಿದ್ದು, ಅಲ್ಲಿ ಅವರ ಕಿರಿಯ ಸಹೋದರ ಮೊಹಮ್ಮದ್ ಸಿದ್ದಿಕ್ ಅವರನ್ನು (80) ಭೇಟಿಯಾಗಿದ್ದರು. ಸಿದ್ದಿಕ್ ಪ್ರಸ್ತುತ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.